
ಶಿರಿಯಾರ ಶ್ರೀ ರಾಮಮಂದಿರಕ್ಕೆ ನುಗ್ಗಿದ ಕಳ್ಳರು-ದೇವರ ವಿಗ್ರಹ, ಕಾಣಿಕೆ ಹುಂಡಿ ಕಳವು: ಶ್ವಾನದಳದಿಂದ ಪತ್ತೆ
ಕುಂದಾಪುರ: ಬ್ರಹ್ಮಾವರ ತಾಲೂಕು ಶಿರಿಯಾರ ಸಮೀಪದ ಕಲ್ಮರ್ಗಿ ಎಂಬಲ್ಲಿನ ಶ್ರೀ ರಾಮ ಮಂದಿರಕ್ಕೆ ಕಳ್ಳರು ನುಗ್ಗಿ ದೇವರ ವಿಗ್ರಹ, ಕಾಣಿಕೆ ಹುಂಡಿ ಕಳವು ಮಾಡಿದ ಘಟನೆ ಮಾ.11 ರಂದು ರಾತ್ರಿ ನಡೆದಿದೆ.
ಕಲ್ಮರ್ಗಿಯ ಶ್ರೀ ರಾಮಾಂಜನೇಯ ಟ್ರಸ್ಟ್ ಆಡಳಿತದಲ್ಲಿರುವ ಶ್ರೀರಾಮ ಮಂದಿರದಲ್ಲಿ ಮಾರ್ಚ್ 11 ರ ರಾತ್ರಿ 9.30 ಕ್ಕೆ ಪೂಜೆಯ ನಂತರ ಅರ್ಚಕರು ಮಂದಿರದ ಬಾಗಿಲನ್ನು ಮುಚ್ಚಿ ಬೀಗ ಹಾಕಿ ಹೋಗಿದ್ದರು. ಈ ಮುನ್ನ ಮಂದಿರ ಆವರಣದಲ್ಲಿನ ಸಭಾ ಭವನದಲ್ಲಿ ಸಂಸ್ಥೆಯೊಂದರ ವಾರ್ಷಿಕೋತ್ಸವ ಆಚರಣೆ ಸಮಾರಂಭ ಇದ್ದಿತ್ತು.
ಮಾರ್ಚ್ 12 ರಂದು ಬುಧವಾರ ಬೆಳಿಗ್ಗೆ 6 ಗಂಟೆಗೆ ದಿನನಿತ್ಯದ ಪೂಜೆಗೆಂದು ಅರ್ಚಕ ರತ್ನಾಕರ ಶೆಣೈಯವರು ಬಂದು ನೋಡುವಾಗ ಮಂದಿರದ ಬಾಗಿಲು ತೆರೆದಿದ್ದು ಒಳಗೆ ದೇವರ ಮೂರ್ತಿ ಹಾಗೂ ಕಾಣಿಕೆ ಹುಂಡಿ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ.
ರತ್ನಾಕರ ಶೆಣೈ ತಕ್ಷಣ ಆಡಳಿತ ಮಂಡಳಿಗೆ ವಿಷಯ ತಿಳಿಸಿದರು. ಆಡಳಿತ ಮಂಡಳಿಯವರು ಬಂದು ನೋಡಿದಾಗ ರಾಮ ಪರಿವಾರವಾದ ರಾಮ,ಲಕ್ಷ್ಮಣ, ಸೀತೆ, ಹಾಗೂ ಹನುಮಂತರ ಪಂಚ ಲೋಹದ ವಿಗ್ರಹಗಳು ಹಾಗೂ ಕಾಣಿಕೆ ಡಬ್ಬಿ ಕಳವು ಆಗಿರುವುದು ತಿಳಿಯಿತು.
ಆಡಳಿತ ಮಂಡಳಿಯವರು ತಕ್ಷಣ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಸ್ಥಳಕ್ಕಾಗಮಿಸಿದ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್, ಕೋಟ ಠಾಣಾ ಎಎಸ್ಐ ಗೋಪಾಲ್ ಪೂಜಾರಿ, ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ, ಶ್ರೀಧರ್, ರೇವತಿ, ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ, ಶಿವರಾಜ್ ತಕ್ಷಣ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಸ್ಥಳ ಪರಿಶೀಲಿಸಿ, ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಶ್ವಾನದಳದವರನ್ನು ಕರೆಸಿದರು. ತ್ವರಿತ ಕಾರ್ಯಾಚರಣೆಯಿಂದಾಗಿ ಕಳವಾದ ವಿಗ್ರಹ ಹಾಗೂ ಕಾಣಿಕೆ ಹುಂಡಿಯನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
'ಸ್ನೈಪರ್' ಶ್ವಾನದ ಯಶಸ್ವಿ ಕಾರ್ಯಾಚರಣೆ, ಕಳವಾದ ವಿಗ್ರಹ ಪತ್ತೆ:
ಶ್ವಾನದಳ ತಂಡವು ಸ್ಥಳಕ್ಕಾಗಮಿಸಿ ಪರಿಶೀಲಿಸಿತು. ಸ್ನೈಪರ್ ಶ್ವಾನವು ಕಳವಾದ ಸ್ಥಳವನ್ನು ಮೂಸಿಕೊಂಡು ಸಮೀಪದ ಅರಣ್ಯ ಪ್ರದೇಶಕ್ಕೆ ಓಡಿತು. ಅಲ್ಲಿಂದ ಸುಮಾರು 600 ಮೀಟರ್ ದೂರದ ನದಿಯ ತೀರದ ವರೆಗೂ ಓಡಿದ್ದು, ಅಲ್ಲಿ ನದಿಯಲ್ಲಿ ಮುಳುಗಿಸಿಟ್ಟ ವಿಗ್ರಹ ಹಾಗೂ ಕಾಣಿಕೆ ಹುಂಡಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ಒಡೆದ ಹುಂಡಿಯನ್ನು ನೀರಿನೊಳಗೆ ಎಸೆದಿದ್ದು, ಸ್ವಲ್ಪ ದೂರದಲ್ಲಿ ವಿಗ್ರಹಗಳನ್ನು ಮುಳುಗಿಸಿಡಲಾಗಿತ್ತು.
ಕಳ್ಳರು ವಿಗ್ರಹ ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿ ನದಿಯ ತೀರಕ್ಕೆ ಹೊತ್ತೊಯ್ದು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿವ ಹಣ ತೆಗೆದುಕೊಂಡು ಖಾಲಿ ಹುಂಡಿ ಹಾಗೂ ರಾಮ,ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವಿಗ್ರಹವನ್ನು ನದಿಗೆ ಎಸೆದು ಹೋಗಿದ್ದರು. ಹುಂಡಿಯಲ್ಲಿ ಸುಮಾರು ಮೂವತ್ತು ಸಾವಿರದಷ್ಟು ಹಣ ಇದ್ದಿರಬಹುದು ಎನ್ನಲಾಗಿದೆ. ದೇವರ ಪಾಣಿ ಪೀಠ ಮತ್ತು ಒಂದು ತುಳಸಿ ಮಣಿ ಹಾರವನ್ನು ಸ್ಥಳದಲ್ಲೇ ಎಸೆದಿದ್ದರು.
ಸ್ನೈಪರ್ ಶ್ವಾನವು ಕಳ್ಳರು ಹೋಗಿದ್ದ ಹಾದಿಯನ್ನು ಹುಡುಕಿಕೊಂಡು ನದಿ ತೀರಕ್ಕೆ ಬಂದು ನಿಂತಿದ್ದು ಅದರಿಂದ ಕಳವಾದ ವಿಗ್ರಹವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಸ್ನೈಪರ್ ಶ್ವಾನದ ಪತ್ತೆ ಕಾರ್ಯಾಚರಣೆಗೆ ಎಲ್ಲರೂ ಅಭಿನಂದಿಸಿದ್ದಾರೆ. ಕ್ರಿಪ್ರ ಕಾರ್ಯಾಚರಣೆಯ ಮೂಲಕ ವಿಗ್ರಹಗಳನ್ನು ಪತ್ತೆ ಮಾಡಿದ ಪೊಲೀಸ್ ತಂಡವನ್ನೂ ಅಭಿನಂದಿಸಿದ್ದಾರೆ.
ಕೋಟ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಕಳ್ಳರ ಜಾಡು ಹಿಡಿಯುವತ್ತ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. 2011ರಲ್ಲಿ ಶ್ರೀ ಪರ್ತಗಾಳಿ ಸ್ವಾಮಿಯವರು ಈ ಮಂದಿರದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ್ದರು. ಕಳ್ಳರ ಈ ದುಷ್ಕೃತ್ಯದಿಂದ ಭಕ್ತರ, ಮುಖ್ಯವಾಗಿ ಜಿ.ಎಸ್.ಬಿ. ಸಮುದಾಯದವರ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ. ಪೋಲೀಸರು ಮತ್ತು ದಳದ ಸ್ಟ್ರೈಪರ್ ನಾಯಿಯ ಕ್ಷಿಪ್ರ ಕಾರ್ಯಾಚರಣೆಯ ಯಶಸ್ಸಿನಿಂದ ತುಸು ಸಮಾಧಾನ ಉಂಟಾಗಿದೆ. ಮಂದಿರದಲ್ಲಿ ಸಿಸಿ ಟಿವಿ ಹಾಗೂ ಸೈರನ್ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ.