
ಬೆಳ್ಳಂಬೆಳಿಗ್ಗೆ ಬ್ರಹ್ಮಾವರಕ್ಕೆ ಲೋಕಾಯುಕ್ತ ಎಂಟ್ರಿ: ಅಧಿಕಾರಿಗಳು ಕಂಗಾಲು
ಕುಂದಾಪುರ: ಶನಿವಾರ ಬೆಳಿಗ್ಗೆ 6.30 ಕ್ಕೆ ರಾಜ್ಯ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಬ್ರಹ್ಮಾವರದ ಕಸ ವಿಲೇವಾರಿ ಘಟಕಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು. ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಸ ವಿಲೇವಾರಿ (ಎಸ್ ಎಲ್ ಆರ್ ಎಂ) ಘಟಕಕ್ಕೆ ಕೆಲವು ದಿನಗಳ ಹಿಂದೆ ಅಕಸ್ಮಾತ್ ಬೆಂಕಿ ಬಿದ್ದು ಬೇರೆಡೆ ಸಾಗಿಸಲೆಂದು ದಾಸ್ತಾನಿರಿಸಿದ್ದ ದೊಡ್ಡ ತ್ಯಾಜ್ಯ ರಾಶಿ ಅರೆಬರೆ ಸುಟ್ಟಿತ್ತು. ಇದನ್ನು ಪರಿಶೀಲಿಸಿದ ಉಪಲೋಕಾಯುಕ್ತರು ಅಳಿದುಳಿದ ಕಸವನ್ನು ಬೇರೆಡೆ ಸಾಗಿಸದಿರುವ ಆಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶಗೊಂಡರು. ಎರಡನೇ ಶನಿವಾರದ ರಜೆಯ ಮೂಡಿನಲ್ಲಿರುವ ಆಧಿಕಾರಿಗಳ ಆಲಸ್ಯವನ್ನು ಕೊಡವಿಹಾಕಿದರು.
ಸಾರ್ವಜನಿಕವಾಗಿ ಜನಜೀವನಕ್ಕೆ ತೊಂದರೆಯಾಗುವ ರೀತಿಯಲ್ಲಿ ಅತ್ಯಂತ ಬೇಜವಾಬ್ದಾರಿತನದಲ್ಲಿ ಕಸ ರಾಶಿ ಹಾಕಿಕೊಂಡಿದ್ದೀರಿ. ಇದರಿಂದಲೇ ಬೆಂಕಿ ಬೀಳುವಂತಾಗಿದೆ ಎಂದು ಗರಂ ಆಗಿ, ಇವರ ವಿರುದ್ದ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಿ ಎಂದು ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು:
'ಒಂದು ದಿನ ಲೇಟಾಗಿದ್ರೆ ಬೇರೆಡೆ ಸಾಗಿಸುತ್ತಿದ್ದೆವು. ಅಷ್ಟರಲ್ಲಿ ಬೆಂಕಿ ಬಿದ್ದಿದೆ ಸಾರ್' ಎಂದು ಹೇಳಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆದರ್ಶ ಶೆಟ್ಟಿಯನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಯಾವುದೇ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳದೇ ಅಪಾಯಕಾರಿಯಾಗಿ ಕಸ ಸಂಗ್ರಹಿಸಿದ್ದೀರಿ. ಇದು ಸರಿಯೇನ್ರಿ? ಒಮ್ಮೆ ಘಟನೆ ನಡೆದು ಹೋಗಿದೆ. ಹಾಗಿದ್ರೂ ಇದುವರೆಗೂ ಉಳಿದ ಕಸ ಕ್ಲೀಯರ್ ಮಾಡಿಲ್ಲ. ಎಲ್ಲೆಡೆ ರಾಶಿ ಬಿದ್ದಿದೆಯಲ್ಲ. ಇದಕ್ಕೆ ಮತ್ತೆ ಬೆಂಕಿ ಬೀಳಬಾರದು ಅಂತ ಇದೆಯೇನ್ರಿ, ಯಾರಾದ್ರು ಸಿಗರೇಟ್ ಸೇದಿ ಹಾಕಿದ್ರೂ ಬೆಂಕಿ ಹತ್ತಿಕೊಳ್ಳುತ್ತೆ. ಆ ಸಂದರ್ಭ ಜೋರಾಗಿ ಗಾಳಿ ಬೀಸಿದ್ರೆ ಊರೆಲ್ಲ ಬೆಂಕಿ ಹರಡುತ್ತೆ. ಈ ರೀತಿ ಚೆಲ್ಲಾಪಿಲ್ಲಿಯಾಗಿ ರಾಶಿ ಹಾಕಿದ್ರೆ ತೊಂದರೆಯಾಗದೇ ಇರುತ್ತಾ? ಇಷ್ಟು ದೊಡ್ಡ ಘಟನೆ ಆಗಿದ್ರೂ ಸುಮ್ಮನೆ ಕುಳಿತಿದ್ರಲ್ಲ? ಯಾರೋ ಬರುತ್ತಾರೆ ಅಂತ ಇಷ್ಟು ದಿನ ಹೀಗೆ ಇಟ್ಟುಕೊಳ್ಳೋದಾ? ತಕ್ಷಣ ಇದನ್ನೆಲ್ಲ ತೆರವು ಮಾಡಬೇಕು ಎಂದು ಸೂಚಿಸಿ, ಅಧಿಕಾರಿಗಳಿಗೆ ಈ ಬಗ್ಗೆ ಕೇಸು ದಾಖಲಿಸಿಕೊಳ್ಳಲು ಹೇಳಿದರು.
ನಂತರ ರಥಬೀದಿಯಲ್ಲಿರುವ ಬೆಂಕಿ ಬಿದ್ದ ಗುಜರಿ ಅಂಗಡಿಯವರೆಗೂ ತೆರಳಿ ಈ ಎಲ್ಲಾ ಅಂಗಡಿಗಳಿಗೆ ಬೆಂಕಿ ಹರಡಿದ್ದರೆ ಏನ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕೋಳಿಯಂಗಡಿಯ ಮಾಲಕನಿಗೆ ವೇಸ್ಟೇಜ್ ಹೇಗೆ ವಿಲೇವಾರಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಈ ಸಂದರ್ಭ ಮಂಗಳೂರು-ಉಡುಪಿ ಲೋಕಾಯುಕ್ತ ಎಸ್.ಪಿ. ಕುಮಾರ ಚಂದ್ರ, ಮಂಗಳೂರು ಲೋಕಾಯುಕ್ತ ಡಿವೈಎಸ್‌ಪಿ ಡಾ.ಗಾನಾ ಪಿ. ಕುಮಾರ್, ಉಡುಪಿ ಪ್ರಭಾರ ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ ನಾಯ್ಕ, ಹಾಗೂ ಉಡುಪಿ ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಇದ್ದರು