
ಮಾ.26ರಂದು ವಿದ್ಯಾರ್ಥಿ ತುಳು ಸಮ್ಮೇಳನ
ಮಂಗಳೂರು: ತುಳು ಪರಿಷತ್ ಮಂಗಳೂರು ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ‘ಎರಡನೇ ವಿದ್ಯಾರ್ಥಿ ತುಳು ಸಮ್ಮೇಳನ-2025’ ಮಾ.26ರಂದು ಬೆಳಗ್ಗೆ 9.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ತುಳು ಭಾಷೆ, ತುಳು ಆರಾಧನೆ ಮತ್ತು ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ, ಎರಡು ಕೃತಿಗಳನ್ನು ಪ್ರಕಟಿಸಿಸಿರುವ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿ ವಿಜೇಶ್ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮ್ಮೇಳನದ ಉದ್ಘಾಟನೆಯನ್ನು ತುಳು ಭಾಷೆ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐಕಳದ ಪೊಂಪೈ ಕಾಲೇಜಿನ ತೃತೀಯ ಬಿ.ಎ. ವಿದ್ಯಾರ್ಥಿನಿ ಸನ್ನಿ ನೆರವೇರಿಸಲಿದ್ದಾರೆ. ಹಿರಿಯ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂವಾದದ ಸಮನ್ವಯಕಾರರಾಗಿಯೂ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತುಳು ಪರಿಷತ್ತಿನ ಅಧ್ಯಕ್ಷ ಶುಭೋದಯ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಗಳ ವಿಜೇತರಾದವರ ನೃತ್ಯ, ಭಾಷಣಗಳು ಪ್ರಸ್ತುತಗೊಳ್ಳಲಿದೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಣೀಯ ‘ತುತ್ತೈತ’ (ವಸ್ತ್ರಾಲಂಕಾರ ಮತ್ತು ಅಲಂಕಾರ) ಸ್ಪರ್ಧೆಯೂ ಆಯೋಜನೆಗೊಳ್ಳಲಿದೆ. ತುಳು ಸಿನಿಮಾ ಮತ್ತು ನಾಟಕಗಳಿಗೆ ಪದ್ಯ ಬರೆದ ಹಿರಿಯ ಸಾಹಿತಿ ಭೋಜ ಸುವರ್ಣ ಅವರಿಗೆ ‘ಡಾ. ಪ್ರಭಾಕರ ನೀರುಮಾರ್ಗ ತುಳು ಪರಿಷತ್ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗುವುದು. ಮಂಗಳೂರು ವಿವಿಯ 2024ನೇ ಸಾಲಿನ ಬಿಕಾಂ ಪರೀಕ್ಷೆಯಲ್ಲಿ 650ಕ್ಕೆ 650 ಅಂಕ ಗಳಿಸಿದ ಆರಾಧನಾ ಶೆಣೈ ಅವರನ್ನು ಸನ್ಮಾನಿಸಲಾಗುವುದು ಎಂದರು.
ತುಳು ಪರಿಷತ್ ಗೌರವಾಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ, ಉಪಾಧ್ಯಕ್ಷೆ ಚಂದ್ರಕಲಾ ರಾವ್, ಕೋಶಾಧಿಕಾರಿ ಸುಮತಿ ಹೆಗ್ಡೆ, ಕಾರ್ಯದರ್ಶಿ ಅಮಿತಾ ಅಶ್ವಿನ್ ಉಪಸ್ಥಿತರಿದ್ದರು.