
ಜನಾರ್ದನ ಭಜನಾ ಮಂದಿರ 75ನೇ ವಾರ್ಷಿಕೋತ್ಸವ
ಮಂಗಳೂರು: ನಗರದ ಜಪ್ಪು ಬಪ್ಪಾಲ್ ಜನಾರ್ದನ ನಗರದ ಶ್ರೀಜನಾರ್ದನ ಭಜನಾ ಮಂದಿರದ 75ನೇ ವಾರ್ಷಿಕೋತ್ಸವ ಮತ್ತು ಅಖಂಡ ಭಜನಾ ಸಪ್ತಾಹ ಏ.4 ರಿಂದ 13ರ ವರೆಗೆ ನಡೆಯಲಿದೆ.
ಇಲ್ಲಿನ ಅಟಲ್ ಸೇವಾ ಕೇಂದ್ರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಮೃತ ಮಹೋತ್ಸವದ ಪ್ರಧಾನ ಸಂಚಾಲಕ ಜೆ.ಪುಂಡಲೀಕ ಸುವರ್ಣ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ಗೌರವಾಧ್ಯಕ್ಷತೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿದೆ. ಏ.4ರಂದು ಬೆಳಗ್ಗೆ 8.30ರಿಂದ ಪುಣ್ಯಹವಾಚನ, ಕಲಶ ಶುದ್ಧಿ, ಪ್ರಧಾನ ಹೋಮ, ಗಣಪತಿ ಹೋಮ, ಸಂಜೆ ಹೊರೆಕಾಣಿಕೆ ನಡೆಯಲಿದೆ. ಏ.5ರ ಬೆಳಗ್ಗೆ 6.19ರಿಂದ ಏ.12ರ ಸೂರ್ಯೋದಯ ವರೆಗೆ ಅಖಂಡ ಭಜನಾ ಸಪ್ತಾಹ ನಡೆಯಲಿದೆ. ಕೊನೆ ದಿನದಂದು ಬೆಳಗ್ಗೆ 8 ಗಂಟೆಗೆ ಅವಭೃತ ಸ್ನಾನ, ಆಶ್ಲೇಷ ಪೂಜೆ, ಶ್ರೀಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಏ.12 ಮತ್ತು 13 ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಕಳೆದ 74 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಕಾರ್ಯಕ್ರಮಗಳನ್ನು ನಮ್ಮ ಮಂದಿರ ಸಮಿತಿ ಹಮ್ಮಿಕೊಂಡು ಬಂದಿದೆ. ಅಮೃತ ಮಹೋತ್ಸವದ ನೆನಪಿಗಾಗಿ 7 ಸೆಂಟ್ಸ್ ಜಾಗ ಖರೀದಿಗೆ ನಿರ್ಧರಿಸಲಾಗಿದೆ. ಜಾಗ ಖರೀದಿ, ಆವರಣ ಗೋಡೆ, ಮೇಲ್ಛಾವಣಿ ಮತ್ತು ಅಮೃತ ಮಹೋತ್ಸವ ಕಾರ್ಯಕ್ರಮಗಳಿಗೆ ಸುಮಾರು 1.50 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದವರು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ಭರತ್ ಕುಮಾರ್, ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಸತೀಶ್ ಆಚಾರ್, ಪದಾಧಿಕಾರಿಗಳಾದ ಲಕ್ಷ್ಮಣ ಆಚಾರ್, ರಘುವೀರ್ ಆಚಾರ್, ಭಜನಾ ಮಂದಿರ ಕಾರ್ಯದರ್ಶಿ ಸುನಿಲ್ ಕುಮಾರ್, ಕೋಶಾಧಿಕಾರಿ ಉಮೇಶ್ ಮತ್ತಿತರರಿದ್ದರು.