
ಕನ್‌ಸ್ಟ್ರಕ್ಷನ್ ಮಜ್ದೂರ್ ಮಹಾ ಸಂಘ: ಮಾ.8,9 ರಂದು ತ್ರೈ ವಾರ್ಷಿಕ ಅಧಿವೇಶನ
ಮಂಗಳೂರು: ಅಖಿಲ ಭಾರತೀಯ ಕನ್‌ಸ್ಟ್ರಕ್ಷನ್ ಮಜ್ದೂರ್ ಮಹಾ ಸಂಘದ 9ನೇ ತ್ರೈ ವಾರ್ಷಿಕ ಅಧಿವೇಶನ ಮಾ.8, 9ರಂದು ನಗರದ ಸಂಘನಿಕೇತನದಲ್ಲಿ ಆಯೋಜಿಸಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಖಿಲ ಭಾರತೀಯ ಕನ್‌ಸ್ಟ್ರಕ್ಷನ್ ಮಜ್ದೂರ್ ಮಹಾಸಂಘದ ಅಧ್ಯಕ್ಷ ಮುರಾರಿ ಪ್ರಸಾದ್ ಅವರು, ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ದೇಶದ 25 ರಾಜ್ಯಗಳ ಸುಮಾರು 500 ಮಂದಿ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಅಧ್ಯಕ್ಷ ಹಿರಣಮಯಿ ಪಾಂಡ್ಯ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದರು.
ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಆಶ್ರಯದಲ್ಲಿ ಅಧಿವೇಶನ ನಡೆಯುತ್ತಿದೆ. ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ .ಆದ್ದರಿಂದ ಈ ಅಧಿವೇಶನದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರನ್ನು ಒತ್ತಾಯಿಸಲಾಗುವುದು ಸೂಕ್ತ ಸ್ಪಂದನೆ ದೊರೆಯದೆ ಇದ್ದಲ್ಲಿ ಮುಂದೆ ತೀವ್ರ ರೀತಿಯ ಹೋರಾಟವನ್ನು ಮಜ್ದೂರ್ ಸಂಘ ಕೈಗೆತ್ತಿಕೊಳ್ಳಲಿದೆ ಎಂದವರು ಎಚ್ಚರಿಸಿದರು.
ಕಟ್ಟಡ ಕಾರ್ಮಿಕರ ಸಮಸ್ಯೆಗಳು, ವಲಸೆ ಕಾರ್ಮಿಕರ ಸಮಸ್ಯೆ, ಕಟ್ಟ ಕಾರ್ಮಿಕ ಮಂಡಳಿಯಲ್ಲಿ ನಡೆಯುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕರಡು ನಿರ್ಣಯವನ್ನು ಮಂಡಿಸಲಾಗುವುದು. ದೇಶಾದ್ಯಂತ ಕಟ್ಟಡ ಕಾರ್ಮಿಕರನ್ನು ಒಟ್ಟುಗೂಡಿಸಿ ಸಂಘಟನೆ ಬೆಳೆಸಲು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಉಪಾಧ್ಯಕ್ಷ ಜಯಂತಿಲಾಲ್‌ಜಿ, ಅಖಿಲ ಭಾರತೀಯ ಮಜ್ದೂರ್ ಸಂಘದ ಉದ್ಯೋಗ ಪ್ರಭಾರಿ ಜಯಂತ್ ದೇಶಪಾಂಡೆ, ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದೊರೈರಾಜ್, ಮುಂತಾದವರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಮುರಾರಿ ಪ್ರಸಾದ್ ವಿವರಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಪದಾಧಿಕಾರಿಗಳಾದ ಜೈನ್ ಬಹದ್ದೂರ್, ಚಿಂತಾಮಣಿ, ಸುರೇಶ್ ನಾಡಿಗೇರ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.