
ದಿಗಂತ್ ನಾಪತ್ತೆ ಪ್ರಕರಣ: ಪೊಲೀಸ್ ನಿಷ್ಕ್ರಿಯತೆ ವಿರೋಧಿಸಿ ಮಾ.10 ರಂದು ಧರಣಿ ಸತ್ಯಾಗ್ರಹ
ಮಂಗಳೂರು: ಫರಂಗಿಪೇಟೆಯ ಪದ್ಮನಾಭ ಹಾಗೂ ಸುಜಾತ ದಂಪತಿ ಪುತ್ರ ದಿಗಂತ್ ನಾಪತ್ತೆಯಾಗಿ ಒಂದುವಾರ ಕಳೆದಿದೆ. ಪೊಲೀಸರು ತನಿಖೆಯಲ್ಲಿ ತೋರಿದ ನಿಷ್ಕ್ರಿಯತೆಯಿಂದಾಗಿ ಆತನ ಪೋಷಕರು ಇನ್ನೂ ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಪೊಲೀಸರ ಈ ನಿಷ್ಕ್ರಿಯತೆ ವಿರೋಧಿಸಿ ಮಾ. 10ರಂದು ಪುದುವಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಂಟ್ವಾಳದ ವಿಎಚ್‌ಪಿ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪುದು ಗ್ರಾಮದ ಅಮ್ಮೆಮಾರು ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ ಅವ್ಯಾಹತವಾಗಿದೆ. ಹಾಗಿದ್ದರೂ ಪೊಲೀಸರು ಪ್ರಕರಣದ ಆರಂಭದಲ್ಲಿ ತೋರಿದ ಲೋಪದೋಷದಿಂದ ನಾಪತ್ತೆ ಮುಂದುವರಿದಿದೆ ಎಂದರು.
ಈ ಹಿಂದೆ ಅಕ್ರಮ ಚಟುವಟಿಕೆಗಳನ್ನು ನಡೆಸುವವರಿಂದ ದಿನೇಶ್ ಎಂಬವರಿಗೆ ಆ ಪ್ರದೇಶದಲ್ಲಿ ಮಾರಣಾಂತಿಕ ಹಲ್ಲೆಯೂ ನಡೆದಿದೆ. ಬೈಕ್ ವಿಚಾರದಲ್ಲಿ ಸಂಘರ್ಷ ಏರ್ಪಟ್ಟು ಇನ್ನೋರ್ವ ಯುವಕನ ಮೇಲೆಯೂ ಮಾರಣಾಂತಿಕ ಹಲ್ಲೆಯಾಗಿದೆ. ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಜನರು ನಡೆದಾಡಲು ಭಯ ಪಡುತ್ತಾರೆ. ದಿಗಂತ್‌ನ ಮೊಬೈಲ್, ಚಪ್ಪಲಿಯನ್ನು ಘಟನಾ ದಿನದಂದೇ ಸ್ಥಳದಿಂದ ಪೊಲೀಸರು ವಶ ಪಡಿಸಿಕೊಂಡಿದ್ದರೂ ಎರಡು ದಿನಗಳ ಕಾಲ ಪೊಲೀಸರಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಪ್ರಕರಣದ ನಡೆದ ಆ ಅವಧಿಯಲ್ಲಿಯೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದರೆ ಯುವಕನ ಪತ್ತೆ ಸಾಧ್ಯವಾಗುತ್ತಿತ್ತು. ಆದರೆ ಅಲ್ಲಿ ಸ್ಥಳೀಯರ ಹಾಗೂ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯವವರೆಗೂ ಪೊಲೀಸರು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪೊಲೀಸರ ನಿಷ್ಕ್ರಿಯತೆಯ ಹೊರತಾಗಿಯೂ ಅಲ್ಲಿನ ಜನರು ಶಾಂತಿಯಿಂದ ಕಾಯುತ್ತಿದ್ದಾರೆ. ಆದರೆ ಪೊಲೀಸರಿಂದ ಧನಾತ್ಮಕ ಪ್ರತಿಕ್ರಿಯೆ ಸಿಗುತ್ತಿಲ್ಲ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಅನುಮಾನಗಳನ್ನು ವ್ಯಕ್ತಪಡಿಸಿ ಸುದ್ದಿ ಪ್ರಸಾರವಾಗುತ್ತಿದೆ. ಇದು ಮನೆಯವರಿಗೆ ಇನ್ನಷ್ಟು ಆತಂಕಕ್ಕೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಔಟ್‌ಪೋಸ್ಟ್ ಬಳಿ ಮಾ. 10ರಂದು ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಿಶೋರ್ ಕುಮಾರ್, ಸಂತೋಷ್ ಉಪಸ್ಥಿತರಿದ್ದರು.