
ಮುಡಾದಲ್ಲಿ ಜನರ ಕೆಲಸಗಳೇ ಅಗುತ್ತಿಲ್ಲ..
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಅಗತ್ಯ ಕೆಲಸ ಮಾಡಿಸಲು ಹೋದರೆ ಕೆಲಸವೇ ಆಗುತ್ತಿಲ್ಲ. ಕೆಲಸ ಮಾಡಿಕೊಡಬೇಕಾದ ಅಧಿಕಾರಿಗಳೇ ಕಚೇರಿಯಲ್ಲಿಲ್ಲ ಎನ್ನುವ ಪರಿಸ್ಥಿತಿ. ಇದ್ದ ಅಧಿಕಾರಿ ಕೆಲಸ ಮಾಡುವುದಿಲ್ಲ. ಜನರು ಕಾದು ಕಾದು ಸುಸ್ತಾಗುತ್ತಿದ್ದಾರೆ.
ಹೆಚ್ಚಿನ ಜನರು ನಿವೇಶನದ ಏಕವಿನ್ಯಾಸ ಮಾಡಿಸಲು ಬರುತ್ತಾರೆ. ಆದರೆ ಕೌಂಟರ್‌ನಲ್ಲಿ ಜನ ಇರುವುದಿಲ್ಲ. ಕೆಲಸ ಮಾಡಿಕೊಡಬೇಕಾದ ನಗರ ಯೋಜನೆ ಅಧಿಕಾರಿ ಇರುವುದೇ ಬಹಳ ವಿರಳ. ಬಂದರೂ ಸಂಜೆ ಬಳಿಕ. ಕೇಳಿದರೆ ಸೈಟ್ ಭೇಟಿ, ಪರಿಶೀಲನೆ ಎಂಬ ಉತ್ತರ ಸಿಗುತ್ತದೆ. ಕಡತ ವಿಲೇವಾರಿಗೆ ಅರ್ಜಿ ಸ್ವೀಕರಿಸುವ ಬದಲು, ಹಿಂಬರಹ ಬರೆದು ಕೊಡುವುದೇ ಹೆಚ್ಚು. ಮಾಲಕರೇ ಬರಬೇಕು ಎಂಬ ಆವಾಜ್ ಬೇರೆ. ಯಾವ ಸರಕಾರಿ ಕಚೇರಿಯಲ್ಲೂ ಇರದ ಟೋಕನ್ ವ್ಯವಸ್ಥೆ ಇಲ್ಲಿದೆ. ಬೆಳಗ್ಗೆ ಬಂದವರಿಗೆ 50, 60 ನಂಬರ್ ಟೋಕನ್ ಕೊಡಲಾಗುತ್ತದೆ. ಸಂಜೆ ತನಕ ಕಾಯಬೇಕು. ಟೋಕನ್ ನಂಬರ್ ಕರೆಯುವಾಗ ಸಂಜೆ ಕಚೇರಿ ಮುಚ್ಚುವ ಸಮಯವಾಗುತ್ತದೆ. ಮತ್ತೆ ಮರುದಿನ ಬರಬೇಕು.ಸಾರ್ವಜನಿಕರಿಂದ ಚೀಟಿಯಲ್ಲಿ ನಂಬರ್ ಬರೆದು ಪಡೆಯಲಾಗುತ್ತದೆ. ಮರುದಿನ ಬಂದಾಗ, ಮತ್ತೆ ನಂಬರ್ ಬರೆದು ಕೊಡಬೇಕು. ಹಿಂದಿನ ದಿನ ಬರೆದು ಕೊಟ್ಟ ನಂಬರ್ ಚೀಟಿ ಲೆಕ್ಕಕ್ಕೆ ಇಲ್ಲದಾಗಿದೆ.
ಹಿಂದೆ ಆಯುಕ್ತರ ಬಂಧನ, ಲೋಕಾಯುಕ್ತ ದಾಳಿ, ಪಕ್ಷದ ಕಾರ್ಯಕರ್ತನಿಂದ ಕಡತ ಪರಿಶೀಲನೆ, ಕೇಸು ದಾಖಲು ನಡೆದಿರುವ ಮುಡಾ ಕಚೇರಿಯಲ್ಲಿ ಈಗ ಮತ್ತೊಂದು ರಾದ್ಧಾಂತ ನಡೆಯುತ್ತಿದೆ. ಇದೀಗ ಕಚೇರಿಯಲ್ಲಿ ನಿವೃತ್ತ ಚಾಲಕನ ಕಾರುಬಾರು ಜೋರಾಗಿದೆ. ನಿವೃತ್ತ ಕಾರು ಚಾಲಕ ಮುಡಾ ಕಚೇರಿಯೊಳಗೆ ಬೆಳಗ್ಗೆ 10 ಗಂಟೆಗೆ ಬಂದು ಕಾರುಬಾರು ನಡೆಸುತ್ತಿರುತ್ತಾನೆ. ಹೇಳುವವರು, ಕೇಳುವವರು ಇಲ್ಲ ಎಂಬ ಪರಿಸ್ಥಿತಿ ಇದೆ.ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ಇಲ್ಲಿ ಅಧಿಕಾರಿಗೆ ಕೆಲಸ ಮಾಡಿಕೊಡುವ ಇಚ್ಚಾಶಕ್ತಿಯೇ ಇಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ಮುಡಾ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಪ್ರವೇಶ ಇಲ್ಲ. ಆದರೆ, ಅಧಿಕಾರಿಗಳೇ ಬ್ರೋಕರ್‌ಗಿರಿ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ನೇರವಾಗಿ ಕೊಟ್ಟು ಸಿಂಗಲ್ ಸೈಟ್ ಫೈಲ್ ಎರಡೇ ದಿನದಲ್ಲಿ ವಿಲೇವಾರಿಯಾಗುತ್ತದೆ.ಇನ್ನು ಜನರು ದಿನವಿಡೀ ಕಾದು ಕುಳಿತರೂ ಬಾರದ ಅಧಿಕಾರಿ, ಬೆಳ್ಳಂಬೆಳಗ್ಗೆ 5 ಗಂಟೆಗೆ ಕಚೇರಿಗೆ ಬರುತ್ತಾರಂತೆ. ಬಂದು ಏನು ಮಾಡುತ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಕಡತಗಳ ವಿಲೇವಾರಿ ಆಗುತ್ತಿಲ್ಲ. ಒಂದು ವೇಳೆ ಪ್ರತಿದಿನ ಕಡತ ವಿಲೇವಾರಿ ನಡೆದರೆ ಜನ ಕಾಯುವ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ನಾಗರಿಕರ ಅಳಲು.
ಮುಡಾದಲ್ಲಿ ಟಿಪಿಎಂ-1,-1, 2-2 ಲ್ಯಾಂಡ್ ಸರ್ವೆ ಆಫೀಸರ್ ಹುದ್ದೆ ಖಾಲಿ ಇದೆ. ನಾಲ್ವರು ಅಧಿಕಾರಿಗಳ ಕೆಲಸ ಒಬ್ಬನೇ ಮಾಡುತ್ತಿದ್ದು, ಒತ್ತಡದಿಂದ ವಿಳಂಬವಾಗುತ್ತಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಹೊಸ ಅಧಿಕಾರಿ ಬಂದರೆ ಸಮಸ್ಯೆ ಪರಿಹಾರವಾಗಬಹುದು ಎನ್ನುತ್ತಾರೆ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ.