
ಬಿಸಿಲಿನಿಂದ ಬೆಂದು ಕಂಗಾಲಾದ ಅಡಿಕೆ ರೈತರು: ಫಸಲಿನ ಕೊರತೆ
ಮಂಗಳೂರು: ಒಂದೆಡೆ ವಿಪರೀತ ಬಿಸಿಲು. ಇದರ ನಡುವೆ ಸುರಿದ ಒಂದೆರಡು ಮಳೆ. ಎರಡೂ ಸೇರಿ ಅಡಿಕೆ ಬೆಳಿಗಾರರು ಬೆಂದು ಕಂಗಾಲಾಗಿದ್ದಾರೆ. ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಅಡಿಕೆ ಮರ ಗಳಿಗೆ ಇತ್ತೀಚಿಗೆ ಸುರಿದ ಮಳೆ ಅಮೃತವಾಗುವ ಬದಲು ವಿಷವಾಗಿದೆ
ಕಳೆದ ವರ್ಷ ಕೂಡ ಇದೇ ರೀತಿ ಆಗಿತ್ತು. ಭಾರೀ ಬಿಸಿಲು ಮತ್ತು ಅದರ ನಡುವೆ ಸುರಿದ ಒಂದೆರಡು ಮಳೆಯ ಕಾರಣ ಹಿಂಗಾರ ಸುಟ್ಟುಹೋಗಿ ಅಡಿಕೆಯ ಫಸಲಿನ ಮೇಲೆ ಬಾರೀ ಪೆಟ್ಟು ಬಿದ್ದಿತ್ತು. 14 ಡಿಗ್ರಿ ಸೆ.ನಿಂದ 36 ಡಿಗ್ರಿ ಸೆ.ಮೊಳಗೆ ತಾಪಮಾನ ಇದ್ದರೆ ಅಡಿಕೆ ಚೆನ್ನಾಗಿ ಬೆಳೆಯುತ್ತದೆ. ಇದಕ್ಕಿಂತ ಕಡಿಮೆಯಾದರೆ ರೋಗಬಾಧೆ ತಗಲುತ್ತದೆ. ಹೆಚ್ಚಾದರೆ ಹಿಂಗಾರ ಒಣಗಿ ಉದುರಲು ಆರಂಭವಾಗುತ್ತದೆ.
ಕಳೆದ ವಾರ ಏಕಾಏಕಿ ಅಬ್ಬರದ ಮಳೆ ಸುರಿದಾಗ ಒಮ್ಮೆ ಅಡಿಕೆ ತೋಟಕ್ಕೆ ತಂಪಾಯಿತು. ಆದರೆ ಎರಡು ದಿನ ಕಳೆದು ಮರಗಳ ಕೊನೆ (ತಲೆ) ನೋಡಿದರೆ ಹಿಂಗಾರವೆಲ್ಲ ಕರಟಿ ಹೋಗಿ ಕೆಂಪಗಾಗಿದೆ. ಮಳೆ ಬಂದಾಗ ನೀರು ನಿಂತು ಮರುದಿನವೇ ರಣ ಬಿಸಿಲು ಬಿದ್ದ ಪರಿಣಾಮ ಹಿಂಗಾರ ಮಾತ್ರವಲ್ಲದೆ ಅಡಿಕೆಯ ಗರಿಗಳೂ ಬಾಡಿ ಹೋಗಿದ್ದವು.
ಈ ವರ್ಷ ಫೆಬ್ರವರಿ ತಿಂಗಳಿನಿಂದಲೇ ವಿಪರೀತ ಬಿಸಿಲಿನ ಬೇಗೆ ಇದ್ದು, ಅನೇಕ ತೋಟಗಳಲ್ಲಿ ಎಳೆಯ ಕಾಯಿ (ನಳ್ಳಿ) ಉದುರುತ್ತಿದೆ. ಇಲಾಖೆ ಸೂಚಿಸಿದ ಯಾವುದೇ ಔಷಧ ಸಿಂಪಡಿಸಿದರೂ ನಿರೀಕ್ಷೆಯ ಪ್ರಮಾಣದಲ್ಲಿ ಫಲಿಸುತ್ತಿಲ್ಲ, ಅಂದರೆ ನಳ್ಳಿ ನಿಲ್ಲುತ್ತಿಲ್ಲ ಎನ್ನುವ ಕೂಗು ಕೃಷಿತ ವರ್ಗದಿಂದ ಕೇಳಿಬರುತ್ತಿದೆ. ಮಳೆಯಿಂದಾಗಿ ಈ ಬಾರಿ ಮೂರನೇ ಮತ್ತು ನಾಲ್ಕನೇ ಕೊಳ್ಳಲಿಗೆ ಅಡಿಕೆಯೇ ಇಲ್ಲವಾಗಿದೆ. ಇನ್ನು ಈ ಬಾರಿಯೂ ಪ್ರಕೃತಿ ಮುನಿದಿರುವುದರಿಂದ ಮುಂದಿನ ಬಾರಿಯೂ ಇದೇ ಪರಿಸ್ಥಿತಿ ಇರುವುದು ಖಚಿತ ಎನ್ನುತ್ತಾರೆ ಬೆಳೆಗಾರರು,
ಅಡಿಕೆಗೆ ವರ್ಷವಿಡಿ ಔಷಧ ಸಿಂಪದ ಣೆಯ ಅನಿವಾರ್ಯ ಎದುರಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಔಷಧ ಸಿಂಪಡಣೆ ಆರಂಭಿಸಬೇಕಾಗುತ್ತದೆ. ಹಿಂಗಾರ ಸಾಯುವ ರೋಗಕ್ಕೆ ಒಂದು ರೀತಿಯ ಔಷಧವಾದರೆ. ಎಲೆಚುಕ್ಕಿ ರೋಗಕ್ಕೆ ಮತ್ತೊಂದು ಸಿಂಪಡಣೆ, ಎರಡನೇ ಬಾರಿ ನೀಡುವ ವೇಳೆ ಔಷಧವನ್ನೇ ಬದಲಾಯಿಸಬೇಕಾಗುತ್ತದೆ. ಕೊಳೆರೋಗಕ್ಕೆ ಬೋಡೋಲ ಸಿಂಪಡಣೆ ಹೀಗೆ ವರ್ಷ ಪೂರ್ತಿ ಅಡಿಕೆ ತೋಟಕ್ಕೆ ಔಷಧ ಸಿಂಪಡಣೆ ಮಾಡಬೇಕಾದ ಅನಿವಾರ್ಯ ರೈತರಿಗೆ ಎದುರಾಗಿದೆ.
ಕುಂಭ ಮಾಸದಲ್ಲಿ (ಮಾರ್ಚ್) ಮಳೆಯಾದರೆ ಗಿಡಮರಗಳಿಗೆ ಅಮೃತ ಸಿಂಚನವಾಗುತ್ತದೆ. ಆದರೆ ಇದು ಅಡಿಕೆ ಬೆಳೆ ಮೇಲೆ ಮಾತ್ರ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಡಿಕೆ ಮರಗಳ ತೊದೆಗಳಲ್ಲಿ ನೀರು ನಿಂತು ಹಿಂಗಾರ ಬೆಂದು ಕರಟುತ್ತದೆ ಇದು ಮೂರು, ನಾಲ್ಕನೇ ಕೊಯ್ಲಿನ ಮೇಲೆ ಪರಿಣಾಮ ಬೀರುತ್ತದೆ.
ಕಳೆದ ವರ್ಷವೂ ಮಾರ್ಚ್ ತಿಂಗಳಿನಲ್ಲಿ ಅಕಾಲಿಕ ಮಳೆ ಹಾಗೂ ವಿಪರೀತ ಬಿಸಿಲಿನಿಂದಾಗಿ ಹೆಚ್ಚಿನ ರೈತರಿಗೆ ಫಸಲು ಕಡಿಮೆಯಾಗಿತ್ತು. ಪುತ್ತೂರು, ಕುಂಬ್ರ, ಸುಳ್ಯ, ಪಂಜ ಪ್ರದೇಶಗಳ ರೈತರಿಗೆ ಶೇ. 30ರಷ್ಟು ಮಾತ್ರವೇ ಅಡಿಕೆ ಫಸಲು ಸಿಕ್ಕಿದ್ದು, ಹೆಚ್ಚಿನ ರೈತರು ಈ ಬಾರಿ ಮೂರನೇ ಕೊಯ್ಲಿಗೆ ಮುಂದಾಗಿಲ್ಲ. ನಾಲ್ಕನೇ ಕೊಯ್ಲಿನ ಪ್ರಶ್ನೆಯೇ ಇಲ್ಲ.
ಹಿಂದೆ ಮಳೆಗಾಲದಲ್ಲಿ ಮಾತ್ರ ಬೋಡೋ, ದ್ರಾವಣ ಸಿಂಪಡನೆ ಮಾಡುವ ಅನಿವಾರ್ಯ ಇತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಆಗಾಗ ಸಿಂಪಡಣೆ ಮಾಡಬೇಕಾಗುತ್ತದೆ. ಕಾರ್ಮಿಕರ ಕೊರ ತೆಯ ನಡುವೆ ಪದೇ ಪದೆ ಸಿಂಪಡಣೆ ಸಾಧ್ಯವಾಗುತ್ತಿಲ್ಲ. ವಾತಾವರಣದ ಬದಲಾವಣೆಯಿಂದ ನೇರ ಪರಿಣಾಮವಾಗುತ್ತಿದ್ದು, ಅನೇಕ ರೈತರು ಪರ್ಯಾಯ ಆದಾಯದ ಮೂಲದತ್ತ ಮುಖ ಮಾಡುತ್ತಿದ್ದಾರೆ. ಜಾಯಿಕಾಯಿ, ಬಾಳೆ, ಕೊಕ್ಕೊ ಇತ್ಯಾದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.