ಡಾ. ವಾಮನ ನಂದಾವರರ ಅಧ್ಯಯನದಲ್ಲಿ ವೈಜ್ಞಾನಿಕ ಶಿಸ್ತು ಮತ್ತು ಹಳ್ಳಿಯ ಸೊಗಡುಗಳಿತ್ತು: ಪ್ರೊ. ಬಿ.ಎ. ವಿವೇಕ ರೈ

ಡಾ. ವಾಮನ ನಂದಾವರರ ಅಧ್ಯಯನದಲ್ಲಿ ವೈಜ್ಞಾನಿಕ ಶಿಸ್ತು ಮತ್ತು ಹಳ್ಳಿಯ ಸೊಗಡುಗಳಿತ್ತು: ಪ್ರೊ. ಬಿ.ಎ. ವಿವೇಕ ರೈ


ಮಂಗಳೂರು: ಡಾ ವಾಮನ ನಂದಾವರ ಅವರ ಜಾನಪದ ಅಧ್ಯಯನದಲ್ಲಿ ವೈಜ್ಞಾನಿಕ ಶಿಸ್ತು ಇತ್ತು ಅದರ ಜೊತೆಗೆ ಹಳ್ಳಿಯ ಸೊಗಡು ಕೂಡ ಇತ್ತು, ಸಂಶೋಧಕನ ಸಹಜ ಚಿಂತನಾ ದೃಷ್ಟಿಕೋನ ಹಾಗೂ ಕವಿತೆ ಕಟ್ಟುವ ಕವಿತ್ವದ ಸಮಚಿತ್ತ ಅವರದ್ದಾಗಿತ್ತು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಇತ್ತೀಚೆಗೆ ನಿಧನರಾದ ಕರ್ನಾಟಕ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಾಮನ ನಂದಾವರ ಅವರಿಗೆ ಮಂಗಳೂರಿನ ತುಳುಭವನದಲ್ಲಿ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.

ಡಾ. ವಾಮನ ನಂದಾವರ ಅವರ ‘ಕೋಟಿ ಚೆನ್ನಯ’ ಗ್ರಂಥವು ಅತ್ಯಂತ ತಳಸ್ಪರ್ಶಿ ಕ್ಷೇತ್ರ ಕಾರ್ಯದ ಅಧ್ಯಯನದ ಮೂಲಕ ಪ್ರಕಟಗೊಂಡ ಶ್ರೇಷ್ಠ ಕೃತಿಯಾಗಿದೆ. ಕೋಟಿ ಚೆನ್ನಯರ ಬಗ್ಗೆ ಹಾಗೂ ತುಳು ಜಾನಪದ ಅಧ್ಯಯನ ಸಲುವಾಗಿ ಬಂದಂತಹ ಅಂತರಾಷ್ಟ್ರೀಯ ಸಂಶೋಧಕರೆಲ್ಲರೂ ಡಾ.ವಾಮನ ನಂದಾವರ ಅವರನ್ನು ಎಲ್ಲಾ ಸಂದರ್ಭದಲ್ಲೂ ಉಲ್ಲೇಖಿಸಿರುತ್ತಾರೆ ಅನ್ನುವುದು ಅವರ ಅಧ್ಯಯನಕ್ಕೆ ಸಂದ ಗೌರವವಾಗಿದೆ ಎಂದರು.

1997ರಲ್ಲಿ ಮಂಗಳೂರಿನಲ್ಲಿ ನಡೆದ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟ ‘ಪೊನ್ನಕಂಠಿ’ ಕೃತಿಯು ಡಾ.ವಾಮನ ನಂದಾವರ ಅವರ ನೇತೃತ್ವದಲ್ಲಿ ಪ್ರಕಟಗೊಂಡದ್ದು ವಾಮನ ನಂದಾವರ ಅವರ ವಿದ್ವತ್ ಹಾಗೂ ಅಧ್ಯಯನ ಶಿಸ್ತಿಗೆ ಸಾಕ್ಷಿಯಾಗಿರುವ ಕೃತಿ ಎಂದು ಬಣ್ಣಿಸಿದರು.

ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಆಗ್ರಹದ ಮನವಿ 2001ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ 2002ರಲ್ಲಿ ಡಾ.ವಾಮನ ನಂದಾವರ ಅವರ ಮೂಲಕ ಸಲ್ಲಿಕೆಯಾಗಿತ್ತು, ಈ ನಿಟ್ಟಿನಲ್ಲಿ ಸಲ್ಲಿಕೆಯಾದ ಪ್ರಥಮ ಮನವಿ ಅದಾಗಿತ್ತು ಎಂಬುದನ್ನು ಪ್ರೊ.ವಿವೇಕ ರೈ ಅವರು ಈ ಸಂದರ್ಭದಲ್ಲಿ ನೆನಪಿಸಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಹಾಗೂ ತುಳು ವಿದ್ವಾಂಸರಾದ ಡಾ. ಚಿನ್ನಪ್ಪಗೌಡ ಮಾತನಾಡಿ, ಡಾ. ವಾಮನ ನಂದಾವರ ಅವರ ಬದುಕಿನ ಸಾರ್ಥಕತೆ ಅಂದರೆ ಅದು ಅವರ ದುಡಿಮೆಯಾಗಿತ್ತು, ಅವರು ಸಾಂಸ್ಕೃತಿಕ, ಸಾಂಸ್ಥಿಕ ಕೆಲಸವನ್ನು ಮಾಡಿಕೊಂಡು ಬಂದವರು, ಈ ಕಾರಣಕ್ಕಾಗಿ ಅವರು ಸದಾ ಸ್ಮರಣೀಯರು ಎಂದು ಹೇಳಿದರು.

ಡಾ. ವಾಮನ ನಂದಾವರ ಅವರ ಪುತ್ರಿ ಹೇಮಶ್ರೀ ಮಾತನಾಡಿ, ನಮ್ಮ ತಂದೆ ನಮ್ಮನ್ನು ಸಾಹಿತ್ಯ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆಸಿದರು, ನಮ್ಮ ವೈಯುಕ್ತಿಕ ಹಾಗೂ  ಕೌಟುಂಬಿಕ ಬದುಕು ಹಾಗೂ ಸಾಹಿತ್ಯ ಸಾಂಸ್ಕೃತಿಕ ಪರಿಸರದ ನಡುವೆ ಯಾವುದೇ ವ್ಯತ್ಯಾಸಗಳು ಇರದೆ ಅವೆಲ್ಲವೂ ನಮ್ಮ ಬದುಕಿನ ಭಾಗವೇ ಆಗಿರುವ ರೀತಿಯಲ್ಲಿ ನಮ್ಮನ್ನು ತಂದೆ ಬೆಳೆಸಿದರು ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಅಕಾಡೆಮಿಯ ಮೊದಲ ಅವಧಿಯ ಸದಸ್ಯರಾಗಿ, ಅಕಾಡೆಮಿಯ ತ್ರೈಮಾಸಿಕ ‘ಮದಿಪು’ ಪತ್ರಿಕೆಯ ಸಂಪಾದಕರಾಗಿ ನಂದಾವರ ಅವರು ಹೊಸ ಅಧ್ಯಯನ ನೆಲೆಯೊಂದನ್ನು ಅಕಾಡೆಮಿಗೆ ತೋರಿಸಿಕೊಟ್ಟವರು. ಮೂರನೇ ಅವಧಿಯ ಅಧ್ಯಕ್ಷರಾಗಿ ಅಕಾಡೆಮಿಯಲ್ಲಿ ಅಧ್ಯಯನ, ಕಾರ್ಯಗಾರ, ಪ್ರಕಟಣೆ ಮೂಲಕ ಹೆಸರು ಶಾಶ್ವತಗೊಳಿಸಿದವರು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಡಾ. ತುಕರಾಮ್ ಪೂಜಾರಿ, ಡಾ.ಗಣನಾಥ ಶೆಟ್ಟಿ ಎಕ್ಕಾರು, ಡಾ.ಜ್ಯೋತಿ ಚೇಳೈರು, ಭಾಸ್ಕರ ರೈ ಕುಕ್ಕುವಳ್ಳಿ, ಬೆನೆಟ್ ಅಮ್ಮನ್ನ, ಗಣೇಶ್ ಕುದ್ರೋಳಿ, ಕಲ್ಲೂರು ನಾಗೆಶ್ ಮತ್ತಿತರರು ಮಾತನಾಡಿದರು.

ಗಾಯಕರಾದ ಮೈಮ್ ರಾಮ್ ದಾಸ್, ತೋನ್ಸೆ ಪುಷ್ಕಲ್ ಕುಮಾರ್ ಅವರು ಡಾ. ವಾಮನ ನಂದಾವರ ಅವರ ಹಾಡುಗಳನ್ನು ಹಾಡುವ ಮೂಲಕ ಗೀತಾ ನಮನ ಸಲ್ಲಿಸಿದರು.

ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್., ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರೀಸ್, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ನಿವೃತ್ತ ಸಕಾಯಕ ಕಮೀಷನರ್ ಪ್ರಭಾಕರ್ ಶರ್ಮಾ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ವಿವಿಧ ಸಾಹ್ಯಿತಿಕ ಸಾಂಸ್ಕೃತಿಕ ಸಂಘಟನೆಗಳ ಪ್ರಮುಖರಾದ ವಾಸುದೇವ ಉಚ್ಚಿಲ್, ದಿನಕರ ಉಳ್ಳಾಲ್, ಚಂದ್ರಹಾಸ ಉಳ್ಳಾಲ್, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ, ಪ್ರೊ. ಕೃಷ್ಣಮೂರ್ತಿ, ಪರಮಾನಂದ ಸಾಲ್ಯಾನ್, ಜಿತು ನಿಡ್ಲೆ, ಡಾ. ಪ್ರಕಾಶ್ ಚಂದ್ರ ಶಿಶಿಲ, ಚಂದ್ರಹಾಸ ಕಣಂತೂರು ಮತ್ತಿತರರು ಉಪಸ್ಥಿತರಿದ್ದರು.

ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article