
ಸವಾಂಗೀಣ ಬೆಳವಣಿಗೆಗೆ ಕ್ರೀಡೆ ಮುಖ್ಯ: ಪ್ರದೀಪ್ ಡಿಸೋಜ
ಮಂಗಳೂರು: ಜೀವನದ ಸವಾಂಗೀಣ ಬೆಳವಣಿಗೆಗೆ ಕ್ರೀಡೆ ಬಹಳ ಮುಖ್ಯ. ಕ್ರೀಡಾ ಮನೋಭಾವ ಇಲ್ಲದ ಜೀವನ ಸಿಹಿ ಇಲ್ಲದ ಹಣ್ಣಿನಂತೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾರ್ಷಿಕ ಕ್ರೀಡಾದಿನ ಉದ್ಘಾಟಿಸಿ ಮಾತನಾಡಿದ ಇವರು ‘ವಿದ್ಯಾರ್ಥಿಗಳು ಹೊರಾಂಗಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕ ಮತ್ತು ಮನಸ್ಸು ಉಲ್ಲಾಸವಾಗುತ್ತದೆ. ಮನಸ್ಸು ಉಲ್ಲಾಸವಾದರೆ ನಾವು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಿ ಕೆಲಸ ಕೂಡ ಸಿಗುತ್ತದೆ ಎಂದ ಅವರು ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಂದ ನಂತರ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಕಡಿಮೆ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ‘ಶಾಲಾ-ಕಾಲೇಜು ದಿನಗಳಲ್ಲಿ ಕ್ರೀಡೆ ವಿದ್ಯಾರ್ಥಿಗಳನ್ನು ಪರಿಪೂರ್ಣತೆಯ ಜೊತೆಗೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ. ಪಾಠ ಪ್ರವಚನದ ಜೊತೆಗೆ ಕ್ರೀಡೆಯು ಪಠ್ಯದ ಭಾಗವಾಗಿ ಮುಂದುವರಿಯಬೇಕು. ಕ್ರೀಡೆಯು ನಾಯಕತ್ವ ಗುಣ, ಆತ್ಮ ವಿಶ್ವಾಸ, ಒಗ್ಗಟ್ಟನ್ನು ಬೆಳೆಸುತ್ತದೆ ಅಲ್ಲದೇ, ನಕಾರಾತ್ಮಕ ಚಿಂತನೆ ಹೋಗಲಾಡಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನ ಸವಾಂಗೀಣ ಅಭಿವೃದ್ಧಿಗೆ ಕಾಲೇಜು ಸಹಕರಿಸಿತು ಎಂಬ ಭಾವನೆ ಮೂಡಬೇಕು ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೇಶವಮೂರ್ತಿ ಟಿ. ಸ್ವಾಗತಿಸಿ, ದೈಹಿಕ ನಿರ್ದೇಶಕ ದಿವಾಕರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಪಂಚಮಿ ನಿರೂಪಿಸಿದರು.