
ಹೋಳಿಯಂದು ಬಿಹಾರ ಮೂಲದ ಕಾರ್ಮಿಕರ ಮೇಲೆ ಹಲ್ಲೆ: ಊರು ತೊರೆದ ಕಾರ್ಮಿಕರು
ಮಂಗಳೂರು: ಉಪ್ಪಿನಂಗಡಿ 34ನೇ ನೆಕ್ಕಿಲಾಡಿಯಲ್ಲಿ ವಾಸ್ತವ್ಯ ಹೂಡಿದ್ದ ಬಿಹಾರ ಮೂಲದ ಕಾರ್ಮಿಕರ ಮೇಲೆ ಹೋಳಿ ಹಬ್ಬದ ದಿನದಂದು ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ಬಳಿಕ ಕಾರ್ಮಿಕರು ಊರು ತೊರೆದ ಕಾರಣ ಅವರನ್ನೆ ಅವಲಂಭಿಸಿ ನಡೆಯುತ್ತಿದ್ದ ಕೆಲಸಗಳು ಸಂಪೂರ್ಣ ಬಂದ್ ಆಗಿದೆ.
೩೪ನೇ ನೆಕ್ಕಿಲಾಡಿಯ ಗ್ರಾಮದ ವಸತಿ ಯೊಂದರಲ್ಲಿ ವಾಸ್ತವ್ಯ ಹೊಂದಿದ್ದ ಸುಮಾರು 40ಕ್ಕೂ ಮಿಕ್ಕಿದ ಬಿಹಾರ ಮೂಲದ ಕಾರ್ಮಿಕರು ಕಳೆದ ಹೋಳಿ ಹಬ್ಬವನ್ನು ಆತರಿಸುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ಕೆಲ ಮಂದಿ ಮದರಸದಿಂದ ಬರುತ್ತಿದ್ದ ಬಾಲಕರಿಬ್ಬರಿಗೆ ಬಣ್ಣ ಹಚ್ಚಿದ್ದಾರೆ ಎಂಬ ಕಾರಣಕ್ಕೆ ಗುಂಪೊಂದು ಕಾರ್ಮಿಕರು ವಾಸ್ತವ್ಯ ಹೊಂದಿದ್ದ ವಸತಿಗೆ ದಾಳಿ ನಡೆಸಿ ಅಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದವರ ಮೇಲೆ ಯದ್ವಾತದ್ವ ಹಲ್ಲೆ ನಡೆಸಿತ್ತೆಂದು ಆರೋಪಿಸಲಾಗಿದೆ.
ಹಲ್ಲೆ ಬಳಿಕ ಓಡಿಹೋಗಿರುವ ಕಾರ್ಮಿಕರು ಎಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಕಾರ್ಮಿಕರು ತಮ್ಮ ವಸತಿಯಲ್ಲಿ ಹಬ್ಬದೂಟಕ್ಕೆಂದು ಸಿದ್ಧಪಡಿಸಿದ್ದ ಭಕ್ಷಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ಕಾರ್ಮಿಕರಿಗೆ ಹಬ್ಬದೂಟವನ್ನು ಸವಿಯಲೂ ಬಿಡಲಿಲ್ಲ ಎಂದು ಆಪಾದಿಸಲಾಗಿತ್ತು. ಹಲ್ಲೆಕೋರರು ಉತ್ತರ ಭಾರತೀಯರ ಮೇಲೆ ಮತ್ತಷ್ಟು ಹಲ್ಲೆ ನಡೆಸುವ ಭೀತಿಯಿಂದ ಇತರ ಕಾರ್ಮಿಕರು ಕೂಡ ಉಪ್ಪಿನಂಗಡಿ ಪರಿಸರವನ್ನು ತೊರೆದು ಹೋಗಿದ್ದಾರೆ ಎಂದು ಹೇಳಲಾಗಿದೆ.
ಹಲ್ಲೆ ನಡೆಸಿದ ಗುಂಪಿನ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಕ್ರೀಟ್, ಕಟ್ಟಡ ನಿರ್ಮಾಣ ಸಹಿತ ಶ್ರಮದಾಯಕ ಕಾರ್ಯಗಳಿಗೆ ಸ್ಥಳೀಯರಿಗಿಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದ ಈ ಕಾರ್ಮಿಕರನ್ನು ಹಲವಾರು ಕ್ಷೇತ್ರಗಳು ಅವಲಂಬಿತವಾಗಿದ್ದವು. ಈಗ ಈ ಕಾರ್ಮಿಕರಿಲ್ಲದೆ ಪರಿಸರದ ಬೀದಿಗಳು ಬಿಕೋ ಎನ್ನುತ್ತಿವೆ.
ಹೋಳಿ ಹಬ್ಬ ಆತರಿಸುತ್ತಿದ್ದ ಹೊರ ರಾಜ್ಯ ಕಾರ್ಮಿಕರು ಮದ್ಯಸೇವಿಸಿ ಜಗಳವಾಡುತ್ತಿದ್ದರು. ಈ ವೇಳೆ ಸ್ಥಳೀಯ ಬಾಲಕರಿಗೆ ಬಣ್ಣ ಹಚ್ಚಿದ ಕಾರಣಕ್ಕೆ ಸ್ಥಳೀಯರು ಬಂದು ವಿಚಾರಿಸಿದ್ದಾರೆ. ಈ ವೇಳೆ ಕಾರ್ಮಿಕರು ಸ್ಥಳೀಯರ ಮೇಲೆ ಹಲ್ಲೆ ಮುಂದಾಗಿದ್ದಾರೆ. ಇದರಿಂದ ಸಿಟ್ಟುಗೊಂಡ ಸ್ಥಳೀಯರು ಗುಂಪುಗೂಡಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.