
ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ: ಸ್ವಾಮಿ ಜಿತಕಾಮಾನಂದಜೀ ಮಹಾರಾಜ್
Wednesday, March 19, 2025
ಮಂಗಳೂರು: ಪತಂಜಲಿ ಋಷಿಮುನಿ ತಿಳಿಸಿದ ಅಷ್ಟಾಂಗ ಯೋಗದ ಏಳನೇ ಮಾರ್ಗವೇ ‘ಧ್ಯಾನ’. ಧ್ಯಾನ ಎಂದರೆ ನಿರಂತರವಾದ ಪ್ರಯತ್ನರಹಿತವಾದ ಒಂದೇ ವಸ್ತುವಿನ ಯಾ ವಿಷಯದ ಯೋಚನೆಯ ಪ್ರವಾಹವಾಗಿದೆ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ಜಿತಕಾಮಾನಂದಜೀ ಮಹಾರಾಜ್ ನುಡಿದರು.
ಅವರು ಇಂದು ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ನಡೆದ ಎರಡು ವಾರಗಳ ಕಾಲ ಜರುಗಿದ ಯೋಗ ಶಿಬಿರ ಸಮರೋಪದಲ್ಲಿ ಆಶೀರ್ವಚನ ನೀಡಿದರು.
ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ. ಅಪೇಕ್ಷಿತ ವಿಷಯದಲ್ಲಿ ಮನಸ್ಸು ಗಾಢವಾಗಿ ಚಿಂತಿಸಲು ಧ್ಯಾನ ಸಹಕಾರಿ. ಮನಸ್ಸನ್ನು ನಿಯಂತ್ರಿಸದೆ ಸುಮ್ಮನೆ ಬಿಟ್ಟರೆ ಅದು ಕೊನೆಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮನಸ್ಸನ್ನು ಪ್ರಥಮವಾಗಿ ನಿಯಂತ್ರಿಸಿಕೊಳ್ಳಬೇಕು. ನಮ್ಮ ವಿವೇಕ (ಬುದ್ಧಿ) ಹೇಳಿದಂತೆ ನಮ್ಮ ಮನಸ್ಸು ಕೇಳಬೇಕೇ ವಿನಹ ಮನಸ್ಸು ಹೇಳಿದಂತೆ ನಾವು ಕೇಳಬಾರದು. ಆದ್ದರಿಂದ ಮನಸ್ಸನ್ನು ಶುದ್ಧಗೊಳಿಸುವ ವಿಧಾನ ತಿಳಿದಿರಬೇಕು. ಹೆಚ್ಚಿನ ನಮ್ಮ ಸಮಸ್ಯೆ ಮನಸ್ಸಿನ ದೋಷದಿಂದಲೇ ಆಗುತ್ತದೆ ಎಂದು ತಿಳಿಸಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು.
ಯೋಗದಿಂದ ರಕ್ತ ಪರಿಚಲನೆ ಸುಧಾರಣೆ, ಹಾರ್ಮೋನುಗಳನ್ನು ಸಮತೋಲನಗೊಳಿಸುವುದು, ಜೀವಕೋಶಗಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುವುದು, ಒತ್ತಡ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು. ಅದಾಗ್ಯೂ ಹಲವಾರು ಯೋಗಾಭ್ಯಾಸಗಳು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಅನಾರೋಗ್ಯದ ಅವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ ಚಂದ್ರಹಾಸ ಬಾಳ ಹಾಗೂ ಹರಿಣಿ ಇವರು ಸಹಕರಿಸಿದರು. ಯೋಗ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಶಿಬಿರಾರ್ಥಿಗಳು ಗೌರವಿಸಿದರು.