
ಗದ್ದೆ ಉಳಿಸಲು ಆಸಕ್ತಿ ವಹಿಸದಿರುವುದು ವಿಪರ್ಯಾಸ: ನರೇಂದ್ರ ರೈ ದೇರ್ಲ
ಮಂಗಳೂರು: ನಾಡಿನ ಕೋಟ್ಯಂತರ ಜನರ ಆಹಾರವಾದ ಅನ್ನದ ಮೂಲನೆಲೆಯಾದ ಗದ್ದೆಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದೆ. ಅವುಗಳನ್ನು ಉಳಿಸುವ ಆಸಕ್ತಿಯನ್ನು ಯಾರೂ ತೋರುತ್ತಿಲ್ಲ. ಬದಲಾಗಿ ಸಂಸ್ಕೃತಿಯನ್ನು ಉಳಿಸುವ ಹೆಸರಿನಲ್ಲಿ ಕಂಬಳ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಕಂಬಳಕ್ಕಾಗಿ ನಡೆಸುವ ಹೋರಾಟ, ತೋರಿಸುವ ಉತ್ಸಾಹವನ್ನು ಗದ್ದೆ ಉಳಿಸಲು ಆಸಕ್ತಿ ವಹಿಸದಿರುವುದು ವಿಪರ್ಯಾಸ ಎಂದು ಲೇಖಕ, ಅಂಕಣಕಾರ ನರೇಂದ್ರ ರೈ ದೇರ್ಲ ಹೇಳಿದರು.
ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯುತ್ತಿರುವ ನಿರ್ದಿಂಗತ ಉತ್ಸವ 2025ದಲ್ಲಿ ರವಿವಾರ ನಡೆದ "ಜೀವ ಸಂರಕ್ಷಣೆ ಮತ್ತು ಆಚರಣಾ ಲೋಕ" ಗೋಷ್ಠಿಯಲ್ಲಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಕರಾವಳಿಯ ಭತ್ತದ ಕೃಷಿ ನಾಶವಾಗುತ್ತಿದೆ. ಗದ್ದೆಗಳು ಕಣ್ಮರೆಯಾಗುತ್ತಿವೆ. ಕಂಬಳಕ್ಕಾಗಿ ಬೀದಿಗಿಳಿಯುವ ರಾಜಧಾನಿಯಲ್ಲೂ ಕಂಬಳ ಆಯೋಜಿಸುವ ನಾವು ಗದ್ದೆಯ ನಾಶದ ಬಗ್ಗೆ ಗಮನ ಹರಿಸುತ್ತಿಲ್ಲ. ಗದ್ದೆ ಉಳಿದರಷ್ಟೇ ಕಂಬಳ ಕ್ರೀಡೆ ಉಳಿಯಬಹುದು ಎಂಬ ಪ್ರಜ್ಞೆ ಇಲ್ಲವಾಗಿದೆ ಎಂದು ನರೇಂದ್ರ ರೈ ದೇರ್ಲ ಹೇಳಿದರು.
ಎಲ್ಲೋ ಯಾವುದೋ ದೇಶದ ಮೇಲೆ ಸರ್ಜಿಕಲ್ ಸ್ಟ್ರೈಕ್ ಆದಾಗ ಸಂಭ್ರಮಿಸುವ ನಾವು ನಮ್ಮ ನೀರು ಮಲಿನವಾದಾಗ, ಗಾಳಿ ವಿಷಕಾರಿಯಾದಾಗ ಮೌನಕ್ಕೆ ಶರಣಾಗುತ್ತೇವೆ. ಜೀವನಾನುಭವದ ಮೂಲಕ ಪಾಠ ಕಲಿತ ಬಯಲು ವಿಶ್ವವಿದ್ಯಾನಿಲಯದ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಮನುಷ್ಯರನ್ನು ಬೆಸೆಯುವ ಕೃಷಿ ಸ್ಥಾನಪಲ್ಲಟವಾಗುತ್ತಿದೆ. ಭೂಮಿಯ ಧಾರಣಾಶಕ್ತಿಗಿಂತಲೂ ಅಧಿಕವಾಗಿ ನಾವು ಭೂಮಿಯ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೇವೆ. ಭೂಮಿ ಇರುವುದು ನಮ್ಮ ಅಗತ್ಯ ಪೂರೈಸಲೇ ವಿನಃ ನಮ್ಮ ದುರಾಸೆ ಈಡೇರಿಸಲು ಅಲ್ಲ ಎಂಬ ವಾಸ್ತವ ಸತ್ಯವನ್ನು ಮರೆತಿದ್ದೇವೆ ಎಂದು ನರೇಂದ್ರ ರೈ ದೇರ್ಲ ನುಡಿದರು.
ನೊಗ, ನೇಗಿಲು ಮೂಲೆಪಾಲಾಗಿದೆ. ನೆಲದ ಬದುಕು ನಾಶವಾಗಿದೆ. ಗದ್ದೆಗಳ ಮೇಲೆ ಮಣ್ಣು ಸುರಿದು ಗಗನಚುಂಬಿ ಕಟ್ಟಡ ನಿರ್ಮಿಸಲಾಗುತ್ತಿದೆ. ಆ ಕಟ್ಟಡದಲ್ಲಿ ವಾಸಿಸುವವರು ಅಂಗೈಯಲ್ಲೇ ಜಗತ್ತನ್ನು ನೋಡುವುದರಲ್ಲಿ ತಲ್ಲೀನರಾಗಿದ್ದಾರೆ. ಭವಿಷ್ಯದ ಮಕ್ಕಳ ಹಿತದೃಷ್ಟಿಯಿಂದ ಇನ್ನಾದರೂ ನಾವು ಭೂಮಿಯನ್ನು ಉಳಿಸಲು ಪ್ರಯತ್ನಿಸಬೇಕಿದೆ ಎಂದು ನರೇಂದ್ರ ರೈ ದೇರ್ಲ ಹೇಳಿದರು.