
ರಾಜ್ಯದ 20,100 ಅಸಹಾಯಕರಿಗೆ ಮಾಸಾಶನದ ನೆರವು 4,500 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳ ವಿತರಣೆ
ಉಜಿರೆ: ರಾಜ್ಯದ 20,100 ಅಸಹಾಯಕರಿಗೆ ಧರ್ಮಸ್ಥಳವು ಮಾಸಾಶನದ ನೆರವನ್ನು ನೀಡುತ್ತಿದ್ದು, ಇದರೊಂದಿಗೆ 4,500 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳನ್ನು ವಿತರಿಸಲಾಯಿತು.
ರಾಜ್ಯಾದ್ಯಂತ ಹಲವಾರು ಕಾರಣಗಳಿಗೆ ತಮ್ಮ ವೃದ್ಧಾಪ್ಯದ ಜೀವನದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದೇ ಅನಾಥರಾಗಿರುವ ಅದೆಷ್ಟೋ ಹಿರಿ ಜೀವಗಳು ಇದ್ದು, ತಮ್ಮ ಇಳಿ ವಯಸ್ಸಿನಲ್ಲಿ ನಡೆದಾಡಲು ಸಾಧ್ಯವಾಗದೇ, ದುಡಿಯಲು ಸಾಧ್ಯವಾಗದೇ ಜೀವನ ನಿರ್ವಹಣೆ ಹಾಗೂ ಒಪ್ಪೊತ್ತಿನ ಊಟಕ್ಕೂ ಪರದಾಡುವವರನ್ನು ಕಾಣುತ್ತೇವೆ. ದೈನಂದಿನ ಜೀವನ ನಿರ್ವಹಣೆಯ ಸಮಸ್ಯೆಯ ಜೊತೆಗೆ ಇವರು ವಯೋ ಸಹಜವಾದ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನೂ ಕಾಣುತ್ತೇವೆ.
ಇಂಥವರಿಗಾಗಿಯೇ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರು ‘ಮಾಸಾಶನ’ದ ಕಾರ್ಯಕ್ರಮ ಜಾರಿಗೆ ತಂದರು. ದುಡಿಯಲು ಶಕ್ತಿಯಿಲ್ಲದೇ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವನ ನಿರ್ವಹಣೆಗಾಗಿ ಪ್ರತೀ ತಿಂಗಳು ಯೋಜನೆಯಿಂದ ಮಾಸಾಶನ ನೀಡುವ ವ್ಯವಸ್ಥೆ ಇದಾಗಿದೆ.
ವಿವಿಧ ಗಂಭೀರ ಕಾಯಿಲೆಯಿಂದ ಬಳಲುತ್ತಾ ತೀರಾ ಸಂಕಷ್ಟದಲ್ಲಿರುವ, ಬಡತನದಲ್ಲಿರುವ ಅಂಗವಿಕಲರಿಗೆ ಹಾಗೂ ಅಸಹಾಯಕ ವೃದ್ಧರಿಗೆ ಮಾಸಾಶನ ನೀಡಲಾಗುತ್ತಿದೆ. ಇಂಥವರಿಗೆ ಪ್ರತೀ ತಿಂಗಳು ಸುಮಾರು 1,000 ರೂ.ನಿಂದ 3,000 ರೂ. ವರೆಗೆ ಮಾಸಾಶನವನ್ನು ಯೋಜನೆಯ ಮೂಲಕ ತಲುಪಿಸಲಾಗುತ್ತಿದೆ.
ಇದರಂತೆ ರಾಜ್ಯದ 20,100 ಅಸಹಾಯಕ ವ್ಯಕ್ತಿಗಳಿಗೆ ಪ್ರತೀ ತಿಂಗಳು ಈ ಮಾಸಾಶನವನ್ನು ತಲುಪಿಸಿ ಅವರ ಜೀವನ ನಿರ್ವಹಣೆಗೆ ಬೆಳಕಾಗಿದೆ ಮತ್ತು ಕಾರ್ಯಕರ್ತರಿಂದ ಸಾಂತ್ವನ ಹಾಗೂ ಯೋಗ ಕ್ಷೇಮ ವಿಚಾರಿಸಲಾಗುತ್ತಿದೆ.
ವಿಶೇಷ ಚೇತನರಿಗೆ ಸಲಕರಣೆಗಳ ವಿತರಣೆ:
ಹಲವರು ಹುಟ್ಟಿನಿಂದ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಎಲ್ಲರಂತೆ ಬದುಕುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ ಇನ್ನು ಕೆಲವರಿಗೆ ದುರದೃಷ್ಟವಶಾತ್ ಅಪಘಾತಗಳು, ಮಾರಕ ರೋಗಗಳು ಹಾಗೂ ವಯಸ್ಸಾದಾಗ ಕಾಣಿಸಿಕೊಳ್ಳುತ್ತದೆ. ಇದನ್ನು ಸಂಪೂರ್ಣ ಸರಿಪಡಿಸಲು ಆಗದಿದ್ದರೆ ಕೆಲವೊಂದು ಬದಲಿ ಪರಿಹಾರಗಳಿವೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಇಂತಹ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡುವ ‘ಜನಮಂಗಲ’ ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಈ ಕಾರ್ಯಕ್ರಮದಲ್ಲಿ ಗಾಲಿಕುರ್ಚಿ (ವೀಲ್ ಚಯರ್), ಶೌಚಾಲಯದ ಬಳಕೆಗಾಗಿ ಗಾಲಿಕುರ್ಚಿ (ಕಮೋಡ್ ವೀಲ್ ಚಯರ್), ನೀರಹಾಸಿಗೆ (ವಾಟರ್ ಬೆಡ್), ನಡುಗೋಲು (ಯು ಶೇಪ್ ವಾಕರ್), ಮೊಣಕೈ ಊರುಗೋಲು (ಎಲ್ಬೋ ಕ್ರಚಸ್), ಊರುಗೋಲು (ಆಕ್ಸಿಲರಿ ಕ್ರಚಸ್), ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್), ಮೂರುಕಾಲಿನ ಕೈಗೋಲು (ತ್ರಿ ಲೆಗ್ ವಾಕಿಂಗ್ ಸ್ಟಿಕ್) ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.
ಈ ಎಲ್ಲಾ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ವಿಶೇಷ ಚೇತನರ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆಯಲ್ಲದೇ ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡುತ್ತಾರೆ.
ಈ ಕಾರ್ಯಕ್ರಮದನ್ವಯ 2024-25ನೇ ವರ್ಷದಲ್ಲಿ 4,500 ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ಉಚಿತವಾಗಿ ಪೂರೈಸಿದ್ದು, ಇಲ್ಲಿಯವರೆಗೆ 32,000 ಫಲಾನುಭವಿಗಳಿಗೆ ನೀಡಲಾಗಿದೆ. ಈ ಸಲಕರಣೆಗಳು ವಿಶೇಷ ಚೇತನರ ಆತ್ಮವಿಶ್ವಾಸ ಹೆಚ್ಚಿಸಿ ಅವರ ದೈನಂದಿನ ಬದುಕಿಗೆ ನೆರವಾಗಿದೆಯೆಂದು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ತಿಳಿಸಿದರು.