
ಮಂಗಳೂರು-ಉಡುಪಿ ನಡುವೆ ಮೆಟ್ರೋ ರೈಲು
ಮಂಗಳೂರು: ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳಲು ಮಾಸ್ಟರ್ ಪ್ಲಾನ್ ರಚಿಸಲು ರಾಜ್ಯ ಸರಕಾರ ಮುಂದಾಗಿದೆ.
ಮಂಗಳೂರು-ಉಡುಪಿ ನಗರಗಳ ಮಧ್ಯ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ 60 ಕಿ.ಮೀ. ಉದ್ದದ ಮಾಸ್ಟರ್ ಪ್ಲಾನ್ ಸಂಕ್ಷಿಪ್ತ ಟಿಪ್ಪಣಿ ಹಾಗೂ ವಿಸ್ತೃತ ಯೋಜನಾ ವರದಿಯನ್ನು ರೂಪಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ರಾಜ್ಯ ಸರಕಾರ ಸೂಚಿಸಿದೆ. ಈ ಕುರಿತು ದ.ಕ. ಮತ್ತು ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದೆ.
ಮಂಗಳೂರು-ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳುವ ಬಗ್ಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆಯವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದರು.
ಮಂಗಳೂರು-ಮಣಿಪಾಲ ಮಧ್ಯೆ ಪ್ರಮುಖ ನಗರ, ಅರೆನಗರ ಹಾಗೂ ಕೈಗಾರಿಕಾ ವಲಯಗಳನ್ನೊಳಗೊಂಡಂತೆ ಮೆಟ್ರೋ ಮಾರ್ಗ ಅಭಿವೃದ್ಧಿ ಪಡಿಸಬಹುದು. ಇದರಿಂದ ಆರ್ಥಿಕ ಪ್ರಗತಿ, ನಗರಾಭಿವೃದ್ಧಿಯೊಂದಿಗೆ ಸಾರಿಗೆ ವ್ಯವಸ್ಥೆ ಸುಲಲಿತವಾಗಬಹುದು ಎಂದು ತಿಳಿಸಿದ್ದಾರೆ.
ಈಗಿರುವ ಸಾರಿಗೆ ವ್ಯವಸ್ಥೆ ದಟ್ಟಣೆಯಿಂದ ಕೂಡಿದೆ. ರಸ್ತೆ ಮಾರ್ಗವನ್ನೇ ಅವಲಂಬಿಸಿರುವುದು ಸಂಚಾರಕ್ಕೆ ಹೆಚ್ಚಿನ ಸಮಯ ತಗಲುತ್ತಿದೆ. ಉದ್ದೇಶಿತ ಮೆಟ್ರೋ ರೈಲು ಯೋಜನೆ ಜಾರಿಯಾದರೆ ಪ್ರಯಾಣದ ಅವಧಿ ಒಂದು ಗಂಟೆಗಿಂತಲೂ ಕಡಿಮೆ ಆಗಲಿದೆ. ಜನಸಂಖ್ಯೆ ಹೆಚ್ಚಿರುವುದರಿಂದ ಮೆಟ್ರೋ ರೈಲು ವ್ಯವಸ್ಥೆ ತರಲು ಸೂಕ್ತ ಎನ್ನಲಾಗಿದೆ.