
45 ಮಂದಿ ವಿಚಾರಣಾಧೀನ ಕೈದಿಗಳು ಅಸ್ವಸ್ಥ
ಮಂಗಳೂರು: ಮಂಗಳೂರಿನಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸುಮಾರು 45 ಮಂದಿ ವಿಚಾರಣಾಧೀನ ಕೈದಿಗಳು ಅಸ್ವಸ್ಥಗೊಂಡ ಘಟನೆ ಬುಧವಾರ ಸಂಭವಿಸಿದೆ.
ಮಧ್ಯಾಹ್ನ ಊಟದ ಬಳಿಕ ಕೈದಿಗಳು ಹೊಟ್ಟೆನೋವು, ವಾಂತಿ ಭೇದಿಯಿಂದ ಬಳಲಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಫುಡ್ ಪಾಯ್ಸನ್‌ನಿಂದ ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ. ಕೈದಿಗಳಿಗೆ ಅವಲಕ್ಕಿ, ಅನ್ನ, ಸಾಂಬಾರು ನೀಡಿರುವ ಮಾಹಿತಿ ಇದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಅಸ್ವಸ್ಥಗೊಂಡಿರುವವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.
ಕಾರಾಗೃಹಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನೀರು ಹಾಗೂ ಆಹಾರದ ಮಾದರಿಯ ಪರೀಕ್ಷೆ ನಡೆಸಿದ್ದಾರೆ. ಕಾರಾಗೃಹದಲ್ಲಿ ಸುಮಾರು 350 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. ಸಂಜೆಯವರೆಗೆ ಸುಮಾರು 45 ಮಂದಿ ಅಸ್ವಸ್ಥಗೊಂಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.