
ಜನರ ಚಿತ್ತ ದೇವರ ಚಿತ್ತ ಒಂದಾದಾಗ ಅದ್ಭುತ ಕಾಯ೯ ಸಾಧ್ಯ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಪುತ್ತಿಗೆ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
ಮೂಡುಬಿದಿರೆ: ಜನರು ಆರ್ಥಿಕ ಶಕ್ತಿವಂತರಾದಂತೆ ಹಳೆಯ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕೊಡುಗೆ ನೀಡುತ್ತಾರೆ. ಇದರಿಂದಾಗಿ ದೇವಸ್ಥಾನ, ದೈವಸ್ಥಾನಗಳು ಅಭಿವೃದ್ಧಿ ಕಾಣುತ್ತಿವೆ. ಜನರ ಚಿತ್ತ ದೇವರ ಚಿತ್ತ ಒಂದಾದಾಗ ಅದ್ಭುತ ಕಾರ್ಯ ಸಾಧ್ಯವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವಾಲಯ, ದೈವಸ್ಥಾನ, ನಾಗಸ್ಥಾನಗಳು ಈ ಜಿಲ್ಲೆಯ ಶಕ್ತಿಕೇಂದ್ರಗಳು ಮಾತ್ರವಲ್ಲ, ಇವು ನಮ್ಮ ಮೂಲ ಬೇರುಗಳಾಗಿವೆ. ನಮ್ಮ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಯಾದರೂ ನಾವು ನಮ್ಮ ಮೂಲ ಬೇರನ್ನು ಮರೆಯಬಾರದು. ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರದಂತಹ ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು ಇದಕ್ಕೆ ಈ ದೇವಾಲಯದ ಪುನರ್ ನಿರ್ಮಾಣವೇ ಸಾಕ್ಷಿಯಾಗಿದೆ ಎಂದರು.
ಚೌಟರ ಅರಮನೆಯ ಕುಲದೀಪ ಎಂ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಕಡಂದಲೆ ಪರಾರಿ ಕೆ.ಪಿ. ಸಂತೋಷ್ ಶೆಟ್ಟಿ, ಉದ್ಯಮಿ ನಂದಕುಮಾರ್ ಕುಡ್ವ, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಬೊಕ್ಕಸ ಚಂದ್ರಶೇಖರ್ ರಾವ್, ಶ್ರೀ ಕ್ಷೇತ್ರ ಕಟೀಲಿನ ವೇ.ಮೂ. ಹರಿನಾರಾಯಣ ಅಸ್ರಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಪ್ರವೀಣ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಉಪಸ್ಥಿತರಿದ್ದರು. ಉಪನ್ಯಾಸಕ ರಾಮ್‌ಪ್ರಸಾದ್ ಕಾಂಚೋಡು ಕಾರ್ಯಕ್ರಮ ನಿರ್ವಹಿಸಿದರು.