
ಮುಹಮ್ಮದ್ ಕುಂಜತ್ತಬೈಲ್‌ಗೆ ನುಡಿ ನಮನ
ಮಂಗಳೂರು: ಮನಪಾ ಮಾಜಿ ಉಪ ಮೇಯರ್ ಆಗಿದ್ದು, ಇತ್ತೀಚೆಗೆ ನಿಧನರಾದ ಮುಹಮ್ಮದ್ ಕುಂಜತ್ತಬೈಲ್ ಸ್ಮರಣಾರ್ಥ ಸಮಾನ ಮನಸ್ಕ ಸಂಘಟನೆಗಳಿಂದ ನುಡಿ ನಮನ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್‌ನಲ್ಲಿ ಗುರುವಾರ ನಡೆಯಿತು.
ಅಸಮಾನತೆ ವಿರುದ್ಧ ದ್ವನಿಯನ್ನು ಎತ್ತಿ ಸಮಾನತೆ, ಸಹಬಾಳ್ವೆ, ಸೌಹರ್ದತೆಗೆ ಒತ್ತು ನೀಡುತ್ತಿದ್ದ ಅಪರೂಪದ ರಾಜಕಾರಣಿ ಮುಹಮ್ಮದ್ ಕುಂಜತ್ತಬೈಲ್ ಹೊಸ ಪೀಳಿಗೆಗೆ ದಾರಿದೀಪ ಎಂದು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಮುಹಮ್ಮದ್ ಅವರು ಉತ್ತಮ ನಾಯಕತ್ವ ಗುಣವನ್ನು ಹೊಂದಿದ್ದು, ಎಲ್ಲರೊಂದಿಗೆ ಅನ್ಯೋನ್ಯತೆ ಬೆಳೆಸಿದವರು. ಮಹಾನಗರಪಾಲಿಕೆಯಲ್ಲಿ ಕಾನೂನು ಸಂಬಂಧಿತ ಸಮಸ್ಯೆಗಳು ಬಂದಾಗ ಮಹಮ್ಮದ್ ಕುಂಜತ್ತಬ್ಥಲ್ ಅವರು ಸೂಕ್ಷ್ಮವಾಗಿ ಯೋಚಿಸಿ ಸಲಹೆಗಳು ನೀಡುತ್ತಿದ್ದು, ಅದು ಸಮಸ್ಯೆಗಳಿಂದ ಪಾರಾಗಲು ಅನುಕೂಲವಾಗುತ್ತಿತ್ತು. ತನ್ನ ನಡವಳಿಕೆ, ಪ್ರಾಮಾಣಿಕತೆ, ಧೋರಣೆ, ಆದರ್ಶ ವ್ಯಕ್ತಿತ್ವ ಮೂಲಕ ಅವರು ಮಾದರಿಯಾಗಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತ ಯಾವ ರೀತಿ ಬದುಕಿದ್ದಾನೆ ಎನ್ನುವುದು ಮುಖ್ಯ. ಆ ರೀತಿ ಸರಳ, ಸಜ್ಜನಿಕೆ ವ್ಯಕ್ತಿತ್ವದೊಂದಿಗೆ ಜಾತ್ಯತೀತ ಚಿಂತನೆಯ ಹಾದಿಯಲ್ಲಿ ನಡೆದ ಮುಹಮ್ಮದ್ ಕುಂಜತ್ತಬೈಲ್ರವರು ತನ್ನ ಜೀವನದುದ್ದಕ್ಕೂ ಸಮಾನ ಮನಸ್ಕ ಸಂಘಟನೆಗೆ ಶಕ್ತಿ ತುಂಬಿದವರು. ತನಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದವರು ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ತಪ್ಪುಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದ ಮುಹಮ್ಮದ್ ಕುಂಜತ್ತಬೈಲ್ರವರ ಚಿಂತನೆ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದ ಬಗೆಗಿನ ಅವರ ಅರಿವು ಅಗಾಧವಾದದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಮಾಜಿ ಮೇಯರ್ ಶಶಿಧರ್ ಹೆಗ್ಡೆ ನುಡಿನಮನ ಸಲ್ಲಿಸಿದರು. ದಲಿತ ಮುಖಂಡ ಎಂ. ದೇವದಾಸ್, ಸಾಮರಸ್ಯ ವೇದಿಕೆಯ ಮಂಜುಳಾ ನಾಯಕ್, ಸಂತ ತೆರೆಸಾ ವಿಚಾರ ವೇದಿಕೆಯ ಪ್ರಮುಖರಾದ ರಾಯ್ ಕ್ಯಾಸ್ತಲಿನೊ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ವಿ. ಕುಕ್ಯಾನ್, ದಯಾನಂದ ಶೆಟ್ಟಿ, ಸಂತೋಷ್ ಬಜಾಲ್, ಎಂ.ಎಸ್. ಮಹಮ್ಮದ್, ಅನಿಲ್ ಕುಮಾರ್, ಪ್ರವೀಣ್ ಚಂದ್ರ ಆಳ್ವ, ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಹಮಾನ್ ಖಾನ್ ಕಾರ್ಯಕ್ರಮ ನಿರೂಪಿಸಿದರು.