ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಪತ್ನಿಗೆ ಹಲ್ಲೆಗೈದು ಬಳಿಕ ಬಲವಂತವಾಗಿ ವಿಷ ಪದಾರ್ಥ ನೀಡಿ ಕೊಲೆಗೈದ ಆರೋಪಿ ಪತಿಗೆ ಮಂಗಳೂರಿನ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್. ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಕುಂಪಲ ಚೇತನ ನಗರದ ಜೋಸೆಫ್ ಫ್ರಾನ್ಸಿನ್ ರೆನ್ಸನ್ ಯಾನೆ ರೆನ್ಸನ್ (53) ಶಿಕ್ಷೆಗೊಳಗಾದ ಆರೋಪಿ. 

2022ರ ಮೇ 11ರಂದು ಮಧ್ಯಾಹ್ನ 2.30ಕ್ಕೆ ಆರೋಪಿಯು ತನ್ನ ಪತ್ನಿ ಶೈಮಾರಿಗೆ ಹಲ್ಲೆಗೈದು ವಿಷ ಪದಾರ್ಥ ನೀಡಿ ಕೊಲೆಗೈದ ಆರೋಪ ಎದುರಿಸುತ್ತಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. 

ಶೈಮಾ ತನ್ನ ಗಂಡನ ಬಳಿ ದುಶ್ಚಟಗಳನ್ನು ಬಿಡುವಂತೆ ಹೇಳುತ್ತಲಿದ್ದು, ಮೇ 11ರಂದು ಶೈಮಾ ಮತ್ತೆ ಬುದ್ಧಿವಾದ ಹೇಳಿದಾಗ ಕುಪಿತಗೊಂಡ ಆರೋಪಿ ಜೋಸೆಫನು ತನ್ನ ಪತ್ನಿಯನ್ನು ಕೊಲೆ ಮಾಡುವ ದುರುದ್ದೇಶದಿಂದ ಗೋಡೆಗೆ ದೂಡಿ ಹಾಕಿ ಚಪಾತಿಯ ಲಟ್ಟಣಿಕೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿತ್ತು. 

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶೈಮಾರಿಗೆ ವಿಷ ಪದಾರ್ಥ ನೀಡಿ ಆತ್ಮಹತ್ಯೆಗೆ ಯತ್ನ ಎಂದು ಬಿಂಬಿಸಲು ಆರೋಪಿಯು ಯತ್ನಿಸಿದ್ದ. ಮಾಹಿತಿ ತಿಳಿದ ಶೈಮಾರ ಇಬ್ಬರು ಗಂಡು ಮಕ್ಕಳು ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ದಿನ ರಾತ್ರಿ 9.59ಕ್ಕೆ ಶೈಮಾ ಮೃತಪಟ್ಟಿದ್ದರು. 

ಈ ಬಗ್ಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಆರೋಪಿಗೆ ಐಪಿಸಿ ಕಲಂ: 498 (ಎ)ರಡಿ 3 ವರ್ಷಗಳ ಶಿಕ್ಷೆ ವಾಸ ಮತ್ತು 10,000 ರೂ.ದಂಡ, ಐಪಿಸಿ ಕಲಂ: 302ರಡಿ ಜೀವಾವಧಿ ಶಿಕ್ಷೆ ಮತ್ತು 15,000 ರೂ. ದಂಡ ಮತ್ತು ಐಪಿಸಿ ಕಲಂ: ೨೦೧ರಡಿ ೩ ವರ್ಷಗಳ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದೆ. ಅಲ್ಲದೆ ಮೃತರ ವಾರಸುದಾರರಾದ ತಂದೆ ಮತ್ತು ಇಬ್ಬರು ಮಕ್ಕಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದೆ. 

ವೈದ್ಯಕೀಯ ಸಾಕ್ಷ್ಯ ..

ಶೈಮಾರ ಮೃತದೇಹದ ಪರೀಕ್ಷೆ ನಡೆಸಿದ ಆಸ್ಪತ್ರೆಯ ವಿಧಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವರ್ಷಾ ಎ.ಶೆಟ್ಟಿ ತಲೆಗೆ ಆದ ಗಂಭೀರ ಗಾಯದಿಂದ ಮೃತಪಟ್ಟಿರುತ್ತಾರೆಂದು ವರದಿ ನೀಡಿದ್ದರು. ಅದರ ಆಧಾರದ ಮೇಲೆ ಅದೇ ದಿನ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ವೈದ್ಯಾಧಿಕಾರಿ ಕೂಡ ನ್ಯಾಯಾಲಯದಲ್ಲಿ ಶವ ಪರೀಕ್ಷಾ ವರದಿಗೆ ಪೂರಕವಾಗಿ ಸಾಕ್ಷಿ ನುಡಿದಿದ್ದರು. 

ಆರೋಪಿಯ 16 ಮತ್ತು 18 ವರ್ಷ ಪ್ರಾಯದ ಗಂಡು ಮಕ್ಕಳು ಘಟನೆ ನಡೆದ ದಿನ ತಾಯಿಯು ಕೋಣೆಗೆ ಹೋಗಿ ಚಿಲಕ ಹಾಕಿ ವಿಷ ಕುಡಿದು ಮೃತಪಟ್ಟಿರುತ್ತಾರೆಂದು ಸಾಕ್ಷಿ ನುಡಿದಿದ್ದರು. ಆದರೂ ಕೂಡ ಸಾಂದರ್ಭಿಕ ಹಾಗೂ ವೈದ್ಯಕೀಯ ಸಾಕ್ಷ್ಯದ ಆಧಾರದ ಮೇಲೆ ಅಭಿಯೋಜನೆಯು ಆರೋಪಿಯ ವಿರುದ್ಧದ ಆರೋಪವನ್ನು ರುಜುವಾತು ಮಾಡಿದೆ ಎಂದು ತೀರ್ಮಾನಕ್ಕೆ ಬಂದ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸರಕಾರದ ಪರವಾಗಿ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article