
ಅನ್ಯ ಧರ್ಮದ ಯುವತಿಯರ ಪ್ರೀತಿಸಿ ಮದುವೆಯಾಗಿ: ಸೂಲಿಬೆಲೆ ಹೇಳಿಕೆಗೆ ವಿರೋಧ
ಮಂಗಳೂರು: ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಹಿಂದೂ ಯುವಕರಿಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಉಳ್ಳಾಲ ತಾಲೂಕಿನ ಕುತ್ತಾರುವಿನಲ್ಲಿ ವಿಶ್ವ ಹಿಂದೂ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ‘ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಎಲ್ಲಿಯ ವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ? ಸ್ವಲ್ಪ ಬದಲಾವಣೆ ತರೋಣ. ನಮ್ಮ ಗಂಡು ಮಕ್ಕಳಿಗೂ ಈ ಬಗ್ಗೆ ಹೇಳಬೇಕು ಎಂದರು.
ಎಷ್ಟು ದಿನ ಅಂತ ನಮ್ಮದೇ ಹೆಣ್ಣುಮಕ್ಕಳನ್ನು ನೋಡುತ್ತೀರಾ ? ಹುಡುಗಿ ಸಿಗಲಿಲ್ಲ, ಹುಡುಗಿ ಸಿಗಲಿಲ್ಲ ಎಂದು ಎಷ್ಟು ದಿನ ಅಂತ ಹೇಳೋಣ. ಸ್ವಲ್ಪ ಬೇರೆಯವರನ್ನು ನೋಡಿ ಅಲ್ವಾ. ನಮ್ಮ ಸಮಾಜದಲ್ಲಿ ನಾವು ನಮ್ಮ ಸಮಾಜದ ಗಂಡು ಮಕ್ಕಳಿಗೆ ಹೆಣ್ಣು ಸಿಕ್ಕಿಲ್ಲವೆಂದು ಆಲೋಚನೆ ಮಾಡುತ್ತಿರುವಾಗ, ಪಕ್ಕದ ಸಮಾಜದಲ್ಲೂ ಸಮಸ್ಯೆಗಳು ಇದೆ ಅಲ್ವಾ? ಧೈರ್ಯ ತುಂಬಿ ಎಂದು ಸೂಲಿಬೆಲೆ ಹೇಳಿದರು.
ಆರಂಭದಲ್ಲಿ ನಮ್ಮ (ಹಿಂದೂ) ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮೂಲಕ ಮದುವೆಯಾಗುತ್ತಿದ್ದರು. ಮತಾಂತರ ಮಾಡುತ್ತಿದ್ದರು. ಈಗ ಹಿಂದೂ ಯುವತಿಯರು ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ, ಹೆಸರನ್ನೇ ಬದಲಾಯಿಸಿ ಹಿಂದೂ ಹೆಸರು ಇಟ್ಟುಕೊಂಡು ಪ್ರೀತಿಯ ನಾಟಕವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅನೇಕ ರಾಜ್ಯಗಳಲ್ಲಿ ಮುಸ್ಲಿಂ ಯುವಕರು ಹಿಂದೂ ಹೆಣ್ಣುಮಕ್ಕಳನ್ನು ಓಲೈಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ವಿಡಿಯೋ ಮಾಡಿ ಇಟ್ಟುಕೊಂಡು ಹೆದರಿಸಿ ಮತಾಂತರ ಮಾಡುವ ಕೃತ್ಯಗಳೂ ನಡೆಯುತ್ತಿವೆ ಎಂದರು.
ಡಿವೈಎಫ್‌ಐ ವಿರೋಧ..
ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸೂಲಿಬೆಲೆ ಭಾಷಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮ್ಮಲ್ಲಿ ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದು. ಯಾವ ಧರ್ಮ, ಯಾವ ಜಾತಿಯವರನ್ನು ಬೇಕಾದರೂ ಮದುವೆಯಾಗಲು ನಮ್ಮ ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ಅದನ್ನು ಸೂಲಿಬೆಲೆ ಹೇಳಬೇಕಾಗಿಲ್ಲ. ಮುಸ್ಲಿಂ ಹೆಣ್ಣುಮಕ್ಕಳನ್ನು ಹಿಂದೂಗಳು, ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಮರು ಪರಸ್ಪರ ಒಪ್ಪಿಗೆ ಇದ್ದರೆ ಮದುವೆಯಾಗಲು ಯಾವುದೇ ಸಮಸ್ಯೆಗಳಿಲ್ಲ. ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸಲು ಹೇಳಿಕೆ ನೀಡಿದ್ದಾರೆ. ಶಾಂತವಾಗಿರುವ ದಕ್ಷಿಣಕನ್ನಡದ ಸ್ಥಿತಿ ಕೆಡಿಸಲು ಈ ಹೇಳಿಕೆ ನೀಡಿದ್ದಾರೆ. ಕೋಮು ದ್ವೇಷದ ಬೆಳೆ ಬೆಳೆಯಲು ಈ ಭಾಷಣ ಮಾಡಿದ್ದಾರೆ ಎಂದಿದ್ದಾರೆ.