
ಮಹಿಳಾ ಅಧಿಕಾರಿ ವಂಚನೆ: ವಿಚಾರಣೆಗೆ ನೋಟಿಸ್ ಜಾರಿ
ಮಂಗಳೂರು: CISF ಮಹಿಳಾ ಅಧಿಕಾರಿ ವಂಚನೆ ಎಸಗಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶ ಮೂಲದ ಯುವಕ ಆತ್ಮಹತ್ಮೆ ಮಾಡಿಕೊಂಡ ಪ್ರಕರಣ ಸಂಬಂಧಿಸಿ ಮಂಗಳೂರು ಪೊಲೀಸರು ಸಿಐಎಸ್‌ಎಫ್ ಅಧಿಕಾರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಅಭಿಷೇಕ್ ಸಿಂಗ್ ಎಂಬಾತ ವಾರದ ಹಿಂದೆ ಮಂಗಳೂರಿನ ಲಾಡ್ಜ್ ಒಂದರ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಅಹ್ಮದಾಬಾದ್ ಮೂಲದ CISF ಅಸಿಸ್ಟೆಂಟ್ ಕಮಾಂಡೆಂಟ್ ಮಹಿಳೆ ಕಾರಣವೆಂದು ಆತ ಸಾವಿಗೂ ಮುನ್ನ ವಿಡಿಯೋ ಮಾಡಿದ್ದ. ಹೀಗಾಗಿ ಅಭಿಷೇಕ್ ಸಿಂಗ್ ಸಹೋದರ ರಾಹುಲ್ ಮಂಗಳೂರಿಗೆ ಬಂದು ಪ್ರಕರಣ ದಾಖಲಿಸಿದ್ದಾರೆ. ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
BNS ಸೆಕ್ಷನ್ 108 ಅಡಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಗೆ ಹಾಜರಾಗುವಂತೆ CISF ಮಹಿಳಾ ಅಧಿಕಾರಿಗೆ ನೋಟೀಸ್ ನೀಡಿದ್ದಾರೆ. CISF ಪ್ರಧಾನ ಕಚೇರಿಗೆ ನೋಟೀಸ್ ರವಾನಿಸಿದ ಹಿನ್ನೆಲೆಯಲ್ಲಿ ಘಟನೆಯ ಕುರಿತು CISF ಪಡೆಯ ಹಿರಿಯ ಅಧಿಕಾರಿಗಳು ಮಂಗಳೂರು ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.
ಅಹ್ಮದಾಬಾದ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಕರ್ತವ್ಯದಲ್ಲಿರುವ ಹರಿಯಾಣಾ ಮೂಲದ ಮಹಿಳಾ ಅಧಿಕಾರಿ ಜೊತೆಗೆ ಸಲುಗೆಯಲ್ಲಿದ್ದ ಅಭಿಷೇಕ್ ಸಿಂಗ್, ಆಕೆಗಾಗಿ 15 ಲಕ್ಷ ಖರ್ಚು ಮಾಡಿದ್ದೇನೆ, ಆದರೆ ಆಕೆ ತನಗೆ ವಂಚನೆ ಎಸಗಿದ್ದಾಳೆ ಎಂದು ದೂರಿದ್ದರು. ಮಾರ್ಚ್ 2 ರಂದು ಮಂಗಳೂರಿನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.