
ಅಕ್ರಮ ಮರಳು ಗಣೆಗಾರಿಕೆ ತಡೆಗೆ ಆದೇಶ
ಮಂಗಳೂರು: ಮೂಳೂರು ತಿರುವೈಲು ಮತ್ತು ಕಂದಾವರ ಗ್ರಾಮದ ಫಲ್ಗುಣಿ ನದಿ ಪಕ್ಕದ ಖಾಸಗಿ ಜಮೀನಿನಲ್ಲಿ ನಡೆಸುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಜಿಲ್ಲಾಡಳಿತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಷರತ್ತುಬದ್ಧ ಆದೇಶ ಹೊರಡಿಸಿದೆ.
ನದಿ ಪಕ್ಕದ ಕೃಷಿಭೂಮಿಯಲ್ಲಿ ರಸ್ತೆ ನಿರ್ಮಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಮರಳು ಸಂಗ್ರಹಿಸಿರುವುದು, ಅದನ್ನು ಸಾಗಿಸಲು ಸಂಪರ್ಕ ರಸ್ತೆಯಾಗಿ ಉಪಯೋಗಿಸುವುದನ್ನು ಕೂಡಲೇ ನಿಲ್ಲಿಸುವಂತೆ ಹಾಗೂ ಮುಂದಿನ ಆದೇಶದ ವರೆಗೆ ಆ ಪ್ರದೇಶದಲ್ಲಿ ಅಕ್ರಮ ಮರಳುಗಣಿಗಾರಿಕೆ ಮತ್ತು ಸಾಗಣೆಗೆ ಬಳಸುವ ಟ್ರಾಕ್ಟರ್ಗಳು, ಟಿಪ್ಪರ್, ಲಾರಿಗಳು ಮತ್ತಿತರ ಯಂತ್ರೋಪಕರಣಗಳ ಸಂಚಾರ ಸ್ಥಗಿತಗೊಳಿಸುವಂತೆ ಮಂಗಳೂರು ಉಪವಿಭಾಗದ ದಂಡಾಧಿಕಾರಿ ಹರ್ಷವರ್ಧನ್ ಎಸ್.ಜೆ. ಅವರು ಆದೇಶಿಸಿದ್ದಾರೆ.
ಖಾಸಗಿ ಜಮೀನಿನಲ್ಲಿ ಗಣಿಭೂ ವಿಜ್ಞಾನ ಇಲಾಖೆ ಪರವಾನಿಗೆ ಪಡೆಯದೆ ಅನಧಿಕೃತ ಮರಳುಗಾರಿಕೆ ಯನ್ನು ಭಾರೀ ಯಂತ್ರೋಪಕರಣಗಳೊಂದಿಗೆ ನಡೆಸಲಾಗು ತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೆ ನದಿ ದಂಡೆಗಳ ಸವೆತ, ಪರಿಸರ ನಾಶ, ಸಾರ್ವಜನಿಕ ಮೂಲಸೌಕರ್ಯಕ್ಕೂ ತೊಂದರೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಹರ್ಷವರ್ಧನ್ ಸ್ಥಳ ಪರಿಶೀಲನೆ ನಡೆಸಿ ಈ ಆದೇಶ ನೀಡಿದ್ದಾರೆ.