
ಭಾರತ ವಿರೋಧಿ ಚಟುವಟಿಕೆಯೇ ಮತಾಂತರಿ ಶಕ್ತಿಗಳ ಸಂಚು: ಶ್ರೇಯಸ್
ಮಂಗಳೂರು: ಸನಾತನವೇ ಭಾರತದ ಸತ್ವ. ಸನಾತನ ಸತ್ವದ ಮೇಲಾಗುತ್ತಿರುವ ದಾಳಿಯೇ ಭಾರತದ ಮೇಲಾಗುತ್ತಿರುವ ಆಕ್ರಮಣ. ಸನಾತನ ಸತ್ವ, ಭಾರತೀಯತೆಯ ಮೇಲೆ ಸಾವಿರಾರು ವರ್ಷಗಳ ನಿರಂತರ ದಾಳಿಯ ನಂತರವೂ ಸನಾತನ ಸತ್ವ ಸನಾತನವಾಗಿಯೇ ಉಳಿದುಕೊಂಡಿದೆ. ಭಾರತ ವಿರೋಧಿ ಚಟುವಟಿಕೆಗಳ ಮೂಲಕ ಸನಾತನದ ಸತ್ವವನ್ನು ಕುಗ್ಗಿಸಲು ಮತಾಂತರಿ ಶಕ್ತಿಗಳು ಪ್ರಯತ್ನ ಮಾಡುತ್ತಲೇ ಇವೆ. ಭಾರತ ವಿರೋಧಿ ಚಟುವಟಿಕೆಯೇ ಮತಾಂತರಿ ಶಕ್ತಿಗಳ ಸಂಚು ಎಂದು ವಕೀಲ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ವಸತಿ ಸಮುಚ್ಚಯ ಪ್ರಮುಖ್ ಶ್ರೇಯಸ್ ಎಚ್ಚರಿಕೆ ನೀಡಿದರು.
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ ರಾತ್ರಿ ಮಂಥನ ಕಾವೂರು ಇದರ ೧೫ನೇ ಕಾರ್ಯಕ್ರಮದಲ್ಲಿ ಮತಾಂತರಿ ಶಕ್ತಿಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು.
ಸನಾತನ ಸತ್ವದ ಮೇಲೆ ಸಾವಿರಾರು ವರ್ಷಗಳಿಂದ ಆಕ್ರಮಣವನ್ನು ಎದುರಿಸುತ್ತಲೇ ಬಂದಿದ್ದೇವೆ. ಮನುಷ್ಯ ಮಾತ್ರವಲ್ಲದೆ ಎಲ್ಲ ಚರಾಚರಿ ಜೀವಿಗಳಿಗೂ ಜೀವವಿದೆ ಎಂದು ಹಿಂದು ಧರ್ಮ ಸಾರುತ್ತದೆ. ಆದರೆ ಇಸ್ಲಾಂ, ಕ್ರೈಸ್ತ ಧರ್ಮಗಳು ಇದನ್ನು ವಿರೋಧಿಸಿವೆ. ಹಿಂದು ಧರ್ಮ ಎಲ್ಲದರಲ್ಲೂ ದೇವರನ್ನು ಕಾಣುತ್ತದೆ. ಆದರೆ ಬೇರೆ ಧರ್ಮದಲ್ಲಿ ಇದು ಕಾಣಲು ಸಿಗುವುದಿಲ್ಲ ಎಂದರು.
ಪೋರ್ಚುಗೀಸರು, ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ವ್ಯಾಪಕವಾದ ಮತಾಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಇವತ್ತಿಗೂ ತುಳುನಾಡಿನ ಅನೇಕ ಕ್ರೈಸ್ತ ಸಮುದಾಯದ ಜನರಲ್ಲಿ ತುಳುನಾಡಿನ ಸರ್‌ನೇಮ್‌ಗಳು ಇರುವುದನ್ನು ನಾವು ಗಮನಿಸಬಹುದು. ಇದು ಇಲ್ಲಿ ನಡೆದಿರುವ ಮತಾಂತರ ಪ್ರಕರಣಗಳಿಗೆ ಪುಷ್ಟಿ ನೀಡುತ್ತವೆ ಎಂದು ಗಮನ ಸೆಳೆದ ಅವರು, ಮತಾಂತರಿ ಶಕ್ತಿಗಳಿಂದ ಭಾರತದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ವಿವರಣೆ ನೀಡಿದರು.
ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಸ್ವಾಮೀಜಿಯವರ ಕೊಲೆ ಪ್ರಕರಣ, ಸ್ವಾಮಿ ಶ್ರದ್ಧಾನಂದರ ಕೊಲೆ ಪ್ರಕರಣಗಳು ಮತಾಂತರಿ ಶಕ್ತಿಗಳು ಭಾರತದ ಮೇಲೆ ಎಸಗುತ್ತಿರುವ ಆಕ್ರಮಣದ ಒಂದು ಭಾಗ. ಇವರು ಮತಾಂತರಗೊಂಡವರನ್ನು ಮರಳಿ ಮಾತೃ ಧರ್ಮಕ್ಕೆ ತರುವ ಕಾರ್ಯ ಮಾಡುತ್ತಿದ್ದುದಲ್ಲದೆ, ಮತಾಂತರ ಆಗುವುದನ್ನು ತಡೆಯುತ್ತಿದ್ದರು. ಇದು ಮತಾಂತರಿ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿ ಬೇರೆ ಮೂಲಗಳಿಂದ ಅವರ ಕೊಲೆಗೆ ಕಾರಣರಾದರು ಎಂದು ತಿಳಿಸಿದರು.
ಅನೇಕ ಜಾಗೃತಿ ಕಾರ್ಯಗಳ ಮಧ್ಯೆಯೂ ಮತಾಂತರ ಈಗಲೂ ಆಗುತ್ತಲೇ ಇದೆ. ಇದನ್ನು ತಡೆಯಲು ಈಗಿನ ಜನಾಂಗಕ್ಕೆ ಧರ್ಮ ಶಿಕ್ಷಣದ ಅಗತ್ಯವಿದೆ. ಧರ್ಮ ಶಿಕ್ಷಣದ ಮೂಲಕ ನಮ್ಮನ್ನು ನಾವು ಬಲಶಾಲಿಗಳನ್ನಾಗಿಸಬೇಕಿದೆ. ಇವತ್ತು ಚಾರಿಟೆಬಲ್ ಟ್ರಸ್ಟ್‌ಗಳು ಎಂದರೆ ಇಸ್ಕಾನ್, ಮಾತಾ ಅಮೃತಾನಂದಮಯಿ ಮೊದಲಾದ ಹಿಂದು ಟ್ರಸ್ಟ್‌ಗಳಿಗೆ ಸಿಗುವ ಮನ್ನಣೆ ಸಿಗುತ್ತಿಲ್ಲ. ಹಿಂದುಗಳ ನೇತೃತ್ವದ ಟ್ರಸ್ಟ್‌ಗಳ ಪ್ರಚಾರ ಆಗದಂತೆ ತಡೆಯುವ ವ್ಯವಸ್ಥಿತ ಹುನ್ನಾರಗಳೂ ನಡೆಯುತ್ತಿವೆ ಎಂದು ಹೇಳಿದರು.
ಆರ್‌ಎಸ್‌ಎಸ್ ಕಾವೂರು ನಗರ ಸಂಘಚಾಲಕ್ ಬಿ.ಕೆ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ್ ಕುದುರೆಮುಖ ಸ್ವಾಗತಿಸಿದರು. ನಿತ್ಯಾನಂದ ಪುಸ್ತಕ ಪರಿಚಯ ಮಾಡಿದರು. ನರಸಿಂಹ ಕುಲಕರ್ಣಿ ವೈಯಕ್ತಿಕ ಗೀತೆ ಹಾಡಿದರು. ಸುಮಿತಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್‌ದಾಸ್ ಮರಕಡ ವಂದಿಸಿದರು.