
ಮಹಿಳಾ ದಿನಾಚರಣೆ: ರಥಬೀದಿ ಕಾಲೇಜಿನಲ್ಲಿ ರಾಧಾ ರಾವ್ ಅವರಿಗೆ ಸನ್ಮಾನ
Saturday, March 8, 2025
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಧಾ ದಯಾನಂದ ರಾವ್ ಟ್ರಸ್ಟ್ ನ ಟ್ರಸ್ಟಿ ರಾಧಾ ರಾವ್ ಅವರನ್ನು ಕಾಲೇಜಿನ ವತಿಯಿಂದ ಪ್ರಾಂಶುಪಾಲರು ಸನ್ಮಾನಿಸಿ ಗೌರವಿಸಿದರು.
ಬಳಿಕ ಅವರು ಮಾತನಾಡಿ, ರಾಧಾ ದಯಾನಂದ ರಾವ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಕಳೆದ 3 ವರ್ಷಗಳಿಂದ ಪ್ರತೀ ವರ್ಷ 5 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡುತ್ತ ಬರುತ್ತಿದ್ದು, ಪ್ರತಿ ವರ್ಷ ನಮ್ಮ ಕಾಲೇಜಿನ 16 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ರಾಧಾ ರಾವ್ ಅವರು ಕಾರ್ಯ ನಿರ್ವಹಿಸುತ್ತಿದ್ದು, ಇದರೊಂದಿಗೆ ನಮ್ಮ ಕಾಲೇಜಿನಲ್ಲಿಯೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ನಾವೂ ಕೂಡ ಶಿಕ್ಷಣದ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಧಾ ರಾವ್ ಅವರು, ಪ್ರತಿಯೊಬ್ಬ ಮಹಿಳೆಯು ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣ ಪಡೆದು ಉತ್ತಮ ಸ್ಥಾನಕ್ಕೆ ಹೋದಮೇಲೆ ಗುರು ಹಿರಿಯರಿಗೆ ಗೌರವ ನೀಡಬೇಕು. ಯಾರನ್ನು ಕಡೆಗಣಿಸಬಾರದು ಎಂದ ಅವರು ಶಿಕ್ಷಣದೊಂದಿಗೆ ಬೇರೆ ಕ್ಷೇತ್ರದಲ್ಲಾದರೂ ಸಾಧನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೋಧಕೇತರ ಸಿಬ್ಬಂದಿಗಳಾದ ಪ್ರಭಾವತಿ, ಶೋಭಾ, ಡೋರಾ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನನ್ಯ ಅತಿಥಿಯನ್ನು ಪರಿಚಯಿಸಿದರು.