
ಕೇಂದ್ರದಲ್ಲೂ ಎಸ್‌ಸಿ ಎಸ್‌ಪಿ, ಟಿಎಸ್‌ಪಿ ಕಾಯ್ದೆ ಜಾರಿಗೆ ಆಗ್ರಹ
ಮಂಗಳೂರು: ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ-ಸಂಸ್ಥೆಗಳ ಮಹಾಒಕ್ಕೂಟದ ನಿಯೋಗವು, ಅದರ ಅಧ್ಯಕ್ಷ ಲೋಲಾಕ್ಷ ಅವರ ನೇತೃತ್ವದಲ್ಲಿ ಭಾನುವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ)ದ ಅಧ್ಯಕ್ಷ ಕಿಶೋರ್ ಮಕ್ವಾನ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ 2013ರಲ್ಲಿ ಜಾರಿಗೆ ತಂದಿರುವ ಎಸ್‌ಸಿ ಎಸ್‌ಟಿ ಟಿಎಸ್‌ಪಿ ಕಾಯ್ದೆ ತರಹ ಕೇಂದ್ರದಲ್ಲೂ ಕಾಯ್ದೆ ತರಲು ಆಯೋಗವು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಘೋಷಣೆಯನ್ನು ಸ್ವಾಗತಿಸಿರುವ ನಿಯೋಗವು, ಇದು ನಿಜವಾಗ ಬೇಕಾದರೆ, ಪ್ರಭುತ್ವದ ಮೂರು ಅಂಗಳಲ್ಲಿ, ಶಾಸಕಾಂಗ, ಕಾರ್ಯಾನ್ ಮತ್ತು ನ್ಯಾಯಾನ್ಗದಲ್ಲಿ, ಎಲ್ಲ ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಜನರಿಗೆ ಸೂಕ್ತ ಪ್ರಾತಿನಿಧ್ಯ ಖಾತರಿ ಆಗಬೇಕು, ಈ ಸಮುದಾಯಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲೇ ಶೇಕಡಾವಾರು ಜನ ಸಂಖ್ಯೆಗೆ ಅನುಗುಣವಾಗಿ ಅನುದಾನಗಳ ಹಂಚಿಕೆ ಮಾಡಲು ಅಗತ್ಯವಾದ ಕೇಂದ್ರೀಯ ಕಾಯ್ದೆ ಜಾರಿಗೆ ತರಬೇಕು ಮತ್ತು ಈ ಸಮುದಾಯಗಳ ವಿರುದ್ಧ ನಡೆಯುವ ತಾರತಮ್ಯ ಮತ್ತು ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸಲು ಸಂವಿಧಾನ ಬದ್ಧ ಅಧಿಕಾರವುಳ್ಳ ಸಾಂಸ್ಥಿಕ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.
ಎನ್‌ಸಿಎಸ್‌ಸಿಯನ್ನು ಇನ್ನಷ್ಟು ಸುದ್ರಢಗೊಳಿಸಲು ಸಂವಿಧಾನದ ವಿಧಿ ೩೩೮ಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ನಿಯೋಗವು, ಕರ್ನಾಟದಲ್ಲಿ ರಾಜ್ಯ ಸರಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ತರಲು ನೇಮಿಸಿರುವ ನ್ಯಾ. ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ತನಿಖಾ ಆಯೋಗದ ವಿಷಯದಲ್ಲಿ ರಾಷ್ಟ್ರೀಯ ಆಯೋಗವು ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದು ಆಗ್ರಹಿಸಿದೆ.
ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಅತಿಯಾಗಿದ್ದು, ರಾಜ್ಯದಲ್ಲಿ ಹಿಂದುಳಿದ ಪ್ರವರ್ಗ-೧ಕ್ಕೆ ಸೇರಿರುವ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರ್ ಸಮುದಾಯದ ಸಾಕಷ್ಟು ಜನ, ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿಯ ಮೊಗೇರ್ ಜಾತಿ ಸರ್ಟಿಫಿಕೇಟ್ ಪಡೆಯುತ್ತಿರುವುದನ್ನು ಪ್ರಸ್ತಾಪಿಸಿರುವ ನಿಯೋಗವು, ಸುಳ್ಳು ಜಾತಿ ಸರ್ಟಿಫಿಕೇಟ್ ಪಡೆದವರ ಮತ್ತು ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಉ.ಕ. ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ.
ಎನ್‌ಐಟಿಕೆಯಲ್ಲಿ ಮೀಸಲಾತಿ ನೀತಿ ಉಲ್ಲಂಘನೆ:
ಮಂಗಳೂರು ಬಳಿಯ ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ-ಕರ್ನಾಟಕ (ಎನ್‌ಐಟಿಕೆ)ದಲ್ಲಿ ಪರಿಶಿಷ್ಟ ಜಾತಿಗಳ ಪ್ರಾಧ್ಯಾಪಕರಿಗೆ ಭಡ್ತಿ ನೀಡುವಲ್ಲಿ ಸಂಸ್ಥೆಯ ಆಡಳಿತವು ಮೀಸಲಾತಿ ನೀತಿಯನ್ನು ಉಲ್ಲಂಘಿಸಿದ್ದು, ಆಯೋಗವು ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ನಿಯೋಗ ಒತ್ತಾಯಿಸಿದೆ.
ನಿಯೋಗದಲ್ಲಿ ಮಹಾಒಕ್ಕೂಟದ ಪದಾಧಿಕಾರಿಗಳಾದ ಸೀತಾರಾಮ ಕೊಂಚಾಡಿ, ಪ್ರೊ. ರಾಜ್ ಮೋಹನ್, ಕಾಂತಪ್ಪ ಅಲಂಗಾರ್, ನಾಗವೇಣಿ ಪಿ., ಪ್ರೊ. ದೊಡ್ಡಮನಿ, ಪದ್ಮನಾಭ ಮೂಡಬಿದ್ರೆ, ಶಿವಪ್ರಸಾದ್ ಮತ್ತು ಇತರರು ಇದ್ದರು.