
ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಬೇರೆ ಯಾರಾದರೂ ಕಾರ್ಯಚರಿಸಿದರೆ ಕ್ರಿಮಿನಲ್ ಪ್ರಕರಣ ದಾಖಲು
ಮಂಗಳೂರು: ಪ್ರೊ. ಬಿ. ಕೃಷ್ಣಪ್ಪ ಅವರಿಂದ ಸ್ಥಾಪನೆಗೊಂಡು ನೋಂದಣಿಯಾಗಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯೇ ನೈಜ ದಲಿತ ಸಂಘರ್ಷ ಸಮಿತಿಯಾಗಿದೆ ಎಂದು ನ್ಯಾಯಾಲಯ ಆದೇಶ ನೀಡಿದೆ. ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ರಾಜ್ಯಾದ್ಯಂತ ಯಾವುದೇ ಸಂಘಟನೆ ಕಾರ್ಯಚಟುವಟಿಕೆ ನಡೆಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಹೇಳಿದರು.
ಪ್ರೊ. ಬಿ. ಕೃಷ್ಣಪ್ಪ ಅವರ ನಿಧನದ ನಂತರ ದಲಿತ ಸಂಘರ್ಷ ಸಮಿತಿಯನ್ನು ಹೈಜಾಕ್ ಮಾಡಲಾಗಿತ್ತು. ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ನಮ್ಮದೇ ನೈಜ ಸಂಘಟನೆ ಎಂಬುದನ್ನು ನಿರೂಪಿಸಲು ಸುದೀರ್ಘ ನ್ಯಾಯಾಂಗ ಹೋರಾಟ ನಡೆಸಲಾಗಿದೆ. ಯಾವುದೇ ಹೊಸ ಸಂಘಟನೆ ದಲಿತ ಸಂಘರ್ಷ ಸಮಿತಿ ಹೆಸರು ಬಳಕೆ ಮಾಡದಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಬೇರೆ ಬೇರೆ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಕಾರ್ಯಕ್ರಮ, ಚಟುವಟಿಕೆ ನಡೆಸುವವರು ಡಾ. ಬಿ.ಆರ್. ಅಂಬೇಡ್ಕರ್, ಪ್ರೊ. ಕೃಷ್ಣಪ್ಪ ಅವರ ಸಿದ್ದಾಂತವನ್ನು ಒಪ್ಪಿಕೊಂಡು ನಮ್ಮ ಸಂಘಟನೆಗೆ ಸೇರ್ಪಡೆಗೊಂಡರೆ ಸ್ವಾಗತಿಸುತ್ತೇವೆ ಎಂದರು.
ಇಡೀ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಎಷ್ಟು ಸಂಘಟನೆಗಳು ನೋಂದಣಿಯಾಗಿವೆ ಎಂಬುದರ ಮಾಹಿತಿ ಪಡೆದು ಅವೆಲ್ಲರ ರದ್ದತಿಗೆ ಹೋರಾಟ ನಡೆಸುತ್ತೇವೆ ಎಂದರು.
ದಲಿತ ಸಂಘರ್ಷ ಸಮಿತಿ ದ.ಕ. ಜಿಲ್ಲಾ ಉಸ್ತುವಾರಿ ಸಂಚಾಲಕ ಮಹಾಲಿಂಗ ಕೆ.ಕಡಬ, ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ಕಡಬ, ಪದಾಧಿಕಾರಿಗಳಾದ ಅಣ್ಣು ಬೆಳ್ತಂಗಡಿ, ಬಾಬು ಎಲ್.ಮಂಗಳೂರು,
ಸೋಮವಾರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಂಚಾಲಕರಾಗಿ ಮಹಾಲಿಂಗ ಕೆ.ಕಡಬ, ಜಿಲ್ಲಾ ಸಂಚಾಲಕರಾಗಿ ಕೃಷ್ಣಪ್ಪ ಸುಣ್ಣಾಜೆ ಕಡಬ, ಕೋಶಾಽಕಾರಿಯಾಗಿ ಭಾಸ್ಕರ ಸುರತ್ಕಲ್, ಸಂಘಟನಾ ಸಂಚಾಲಕರಾಗಿ ಸುಂದರ ನಿಡ್ಪಳ್ಳಿ, ಪಿ.ಕೆ. ರಾಜು ಬೆಳ್ತಂಗಡಿ, ಬಾಬು ಎಲ್.ಮಂಗಳೂರು, ಪುಟ್ಟಣ್ಣ ಬೆಳ್ತಂಗಡಿ, ಮಹೇಶ್ ಪುತ್ತೂರು, ಅಣ್ಣು ಬೆಳ್ತಂಗಡಿ, ಯಶೋಧಾ ಸುರತ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಮಹೇಶ್ ಪುತ್ತೂರು, ಸುಂದರ ನಿಡ್ಪಳ್ಳಿ, ಪುಟ್ಟಣ್ಣ ಬೆಳ್ತಂಗಡಿ, ಯಶೋಧಾ ಸುರತ್ಕಲ್, ಭಾಸ್ಕರ ಸುರತ್ಕಲ್ ಉಪಸ್ಥಿತರಿದ್ದರು.