
ಕಳೆದೆರಡು ವರ್ಷಗಳಲ್ಲಿ ಸ್ಕಿಲ್ ಇಂಡಿಯಾ ಕಾರ್ಯಕ್ರಮದಡಿ ಆಹಾರ ಸಂಸ್ಕರಣೆ, ಪ್ರವಾಸೋದ್ಯಮ ಮತ್ತು ಆತಿಥ್ಯ, ಏರೋಸ್ಪೇಸ್: ಸಂಸದ ಚೌಟ ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಸೇರಿ ಕರಾವಳಿ ಭಾಗದಲ್ಲಿ ಯುವಕರಿಗೆ ಮೀನುಗಾರಿಕೆ, ಶಿಪ್ ಬಿಲ್ಡಿಂಗ್, ಸಾಗರ ಪ್ರವಾಸೋದ್ಯಮ ಕುರಿತಂತೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದಕ್ಕೆ ಮಂಗಳೂರಿನಲ್ಲಿ ಪ್ರಾದೇಶಿಕ ಪೂರಕ ಕಾರ್ಯಕ್ರಮ ರೂಪಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವರಿಗೆ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಯಲ್ಲಿ ಸಂಸದರು ಈ ವಿಷಯ ಪ್ರಸ್ತಾಪಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಚಿವಾಲಯವು ಪಿಎಂಕೆವಿಐ 4.0 ಕಾರ್ಯಕ್ರಮದಡಿ ದಕ್ಷಿಣ ಕನ್ನಡದಲ್ಲಿ ಮೀನುಗಾರಿಕೆ ಹಾಗೂ ಸೀಫುಡ್ ಸಂಸ್ಕರಣೆ ಸಂಬಂಧ 570 ಮಂದಿ ತಂತ್ರಜ್ಞರಿಗೆ ಹಾಗೂ ಪ್ರವಾಸೋದ್ಯಮ ಮತ್ತು ಆತಿಥ್ಯಕ್ಕೆ ಸಂಬಂಧಿಸಿದಂತೆ 636 ಮಂದಿಗೆ ತರಬೇತಿ ನೀಡಲಾಗಿದೆ. ಜತೆಗೆ ಶಿಪ್ ಬಿಲ್ಡಿಂಗ್ ಹಾಗೂ ಸಮುದ್ರ ಪ್ರವಾಸೋದ್ಯಮದ ಬಗ್ಗೆಯೂ ತರಬೇತಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಪಿಎಂಕೆವಿವೈ 4.0 ಯೋಜನೆಯಡಿ ದಕ್ಷಿಣ ಕನ್ನಡದಲ್ಲಿ 14 ತರಬೇತಿ ಸೆಂಟರ್‌ಗಳನ್ನು ಪಟ್ಟಿ ಮಾಡಲಾಗಿದೆ. ಆ ಮೂಲಕ ಏರೋಸ್ಪೇಸ್ ಹಾಗೂ ವಿಮಾನಯಾನದ ಬಗ್ಗೆ 90 ಮಂದಿ ಹಾಗೂ 191 ಮಂದಿಯನ್ನು ಕೈಗಾರಿಕಾ ತರಬೇತುಗೊಳಿಸಲಾಗಿದೆ. ಇನ್ನು ಐಟಿಐ ನೆಟ್ವರ್ಕ್ ಅನ್ನು ಬಲಪಡಿಸುವುದಕ್ಕೆ ತರಬೇತಿ ಮಹಾ ನಿರ್ದೇಶನಾಲಯ(ಡಿಜಿಟಿ) ಮೂಲಕ ಇಂಧನ, ಎಲೆಕ್ಟ್ರಾನಿಕ್ಸ್, ಬಂಡವಾಳ ಸರಕು ಮತ್ತು ಉತ್ಪಾದನೆ, ಕೈಗಾರಿಕಾ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಎರಡು ಸರ್ಕಾರಿ ಹಾಗೂ 10 ಖಾಸಗಿ ಸಂಸ್ಥೆಗಳಿವೆ. ಆ ಮೂಲಕ ನಾನಾ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶ ಸೃಷ್ಟಿಸುವ ನುರಿತ ಮಾನವ ಸಂಪತ್ತನ್ನು ತಯಾರು ಮಾಡಲಾಗುತ್ತಿದೆ ಎಂದು ಸಚಿವಾಲಯ ತನ್ನ ಉತ್ತರದಲ್ಲಿ ತಿಳಿಸಿದೆ.
ಯುವಕರಿಗೆ ಔದ್ಯೋಗಿಕವಾಗಿ ಉಜ್ವಲ ಭವಿಷ್ಯವನ್ನು ರೂಪಿಸುವುದಕ್ಕೆ ಶೈಕ್ಷಣಿಕವಾದ ಕಲಿಕೆ ಜತೆಗೆ ಪ್ರಬಲವಾದ ವೃತ್ತಿಪರ ತರಬೇತಿಯನ್ನು ಸಂಯೋಜನೆಗೊಳಿಸಬೇಕು. ಇದರಿಂದ ಕೈಗಾರಿಕೆಗಳಿಗೂ ತಮ್ಮ ನಿರೀಕ್ಷೆ-ಆದ್ಯತೆಗೆ ಅನುಕೂಲವಾಗುವ ಅಭ್ಯರ್ಥಿಗಳನ್ನು ನೇಮಕಗೊಳಿಸುವುದಕ್ಕೆ ಅನುಕೂಲವಾಗುತ್ತದೆ. ತಂತ್ರಜ್ಞಾನದಲ್ಲಿ ವೇಗವಾಗಿ ಆಗುತ್ತಿರುವ ಬದಲಾವಣೆಯಿಂದ ಕೌಶಲ್ಯಾಧಾರಿತ ಅಭ್ಯರ್ಥಿಗಳನ್ನು ತಯಾರಿಸುವುದು ಕೂಡ ಒಂದು ದೊಡ್ಡ ಸವಾಲಾಗಿದೆ. ಹೀಗಿರುವಾಗ, ದಕ್ಷಿಣ ಕನ್ನಡದ ಯುವ ಸಮುದಾಯಕ್ಕೆ ನಾವಿನ್ಯ ತಂತ್ರಜ್ಞಾನ ಆವಿಷ್ಕಾರಗಳನ್ನು ಆಧರಿಸಿ ದೊರೆಯುವ ಕೌಶಲ್ಯಾಧಾರಿತ ತರಬೇತಿಯು ಸಾಗರೋದ್ಯಮ, ಪ್ರವಾಸೋದ್ಯಮ, ಉತ್ಪಾದನಾ ವಲಯಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ. ಹೀಗಾಗಿ, ಕೇಂದ್ರ ಸರ್ಕಾರದ ಈ ರೀತಿ ಕೌಶಲಾಭಿವೃದ್ಧಿ ಯೋಜನೆ-ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಸದನಾಗಿ ಜಿಲ್ಲೆಯಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.