
ಮಾ.22 ರಂದು ಶ್ರೀ ಕ್ಷೇತ್ರ ಕಣ್ವತೀರ್ಥದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ
ಮಂಜೇಶ್ವರ: ಮಂಜೇಶ್ವರ ಕುಂಜತ್ತೂರಿನಲ್ಲಿರುವ ಶ್ರೀ ಕ್ಷೇತ್ರ ಕಣ್ವತೀರ್ಥದಲ್ಲಿ ಕಣ್ವತೀರ್ಥ ನಾಗಮಂಡಲೋತ್ಸವ ಸಮಿತಿಯ ನೇತೃತ್ವದಲ್ಲಿ ಮಾ.22 ರಂದು ಅಷ್ಟಪವಿತ್ರ ನಾಗಮಂಡಲೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಾಗಮಂಡಲೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ, ಕಣ್ವತೀರ್ಥ ಮಠದ ಪರಿಸರದಲ್ಲಿ ಪ್ರಥಮ ಬಾರಿಗೆ ಸಮಸ್ತ ಭಕ್ತರ ಜ್ಞಾತಾಜ್ಞಾತಾ ಸರ್ವ ನಾಗದೋಷ ನಿವಾರಣೆ, ಸದಭೀಷ್ಠ ಪ್ರಾಪ್ತಿ ಹಾಗೂ ಲೋಕಕಲ್ಯಾಣಾರ್ಥವಾಗಿ ನಾಗದೇವರಿಗೆ ಅತ್ಯಂತ ಪ್ರಿಯವಾದ ನಾಗಮಂಡಲೋತ್ಸವ ಜರಗಲಿದೆ. ಮಾ.22 ರಂದು ಸಂಜೆ 5.30ಕ್ಕೆ ಹಾಲಿಟ್ಟು ಸೇವೆ ಬಳಿಕ 7 ಗಂಟೆಯಿಂದ ನಾಗಮಂಡಲ ನಡೆಯಲಿದೆ ಎಂದರು.
ಅಂದು ಬೆಳಗ್ಗೆ 7 ಗಂಟೆಗೆ ಪುಣ್ಯಾಹ, ಗಣ ಹೋಮ, ನಾಗದೇವರಿಗೆ ಪಂಚಾಮೃತ ಅಭಿಷೇಕ, ಪಂಚವಿಂಶತಿ ಕಲಶ, ಪ್ರಧಾನಹೋಮ, ಸರ್ಪತ್ರಯ ಮಂತ್ರ ಹೋಮ, ಆಶ್ಲೇಷಾ ಬಲಿ, ಆಶ್ಲೇಷಾ ಬಲಿ ಹೋಮ, ದುರ್ಗಾ ಹೋಮ, ದ್ವಾದಶ ಮೂರ್ತಿ ಆರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಸುಹಾಸಿನಿ ಆರಾಧನೆ, ವಟು ಆರಾಧನೆ ಮತ್ತು ಕನ್ನಿಕಾ ಆರಾಧನೆ ನಡೆಯಲಿದೆ. 11 ಗಂಟೆಗೆ ಶ್ರೀ ನಾಗದೇವರಿಗೆ ಮಹಾ ಪೂಜೆ ಹಾಗೂ 11.30ಕ್ಕೆ ಪಲ್ಲಪೂಜೆ ನೆರವೇರಲಿದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಮಾ.8ರಿಂದಲೇ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ ಎಂದವರು ವಿವರಿಸಿದರು.
ನಾಗಮಂಡಲೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಶ್ರೀ ಕ್ಷೇತ್ರ ಕಣ್ವತೀರ್ಥ ಉಡುಪಿ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಕ್ಷೇತ್ರವಾಗಿದೆ. ಮಾ.22ರಂದು ಪೂರ್ವಾಹ್ನ 10.30ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಗಳು ಪಾಲ್ಗೊಂಡು ಆಶೀರ್ವಚನ ನೀಡುವರು ಎಂದರು.
ಚಿತ್ರಾಪುರದ ವೇದಮೂರ್ತಿ ಕಗ್ಗಿ ಗೋಪಾಲಕೃಷ್ಣ ಆಚಾರ್ಯರ ಮಾರ್ಗದರ್ಶನದಲ್ಲಿ ಕಣ್ವತೀರ್ಥ ವೇದಮೂರ್ತಿ ಕೆ.ಎಸ್.ಕೃಷ್ಣ ಭಟ್ ಹಾಗೂ ಚಿತ್ರಾಪುರದ ವೇದಮೂರ್ತಿ ಕಗ್ಗಿ ಶ್ರೀನಿವಾಸ ಆಚಾರ್ಯರ ಪೌರೋಹಿತ್ಯದಲ್ಲಿ ನಾಗಮಂಡಲೋತ್ಸವ ವಿಜೃಂಬಣೆಯಿಂದ ಜರಗಲಿದೆ ಎಂದು ವಿವರಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಆಚಾರ್ಯ, ಉಪಾಧ್ಯಕ್ಷರಾದ ಆನಂದ ಎಸ್.ಉದ್ಯಾವರ್, ಪ್ರೇಮ ಹೊನ್ನೆ, ಕೋಶಾಧಿಕಾರಿ ಗೋಪಾಲ ಸಾಲ್ಯಾನ್, ಕಿಶನ್ ಕುಮಾರ್, ಮಾತೃಮಂಡಳಿಯ ಅಧ್ಯಕ್ಷೆ ವಿಶಾಲಾಕ್ಷಿ ಕಣ್ವತೀರ್ಥ ಉಪಸ್ಥಿತರಿದ್ದರು.