ಆಳ್ವಾಸ್ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆ: 20134 ಅರ್ಜಿ ಸಲ್ಲಿಕೆ: 18,634 ವಿದ್ಯಾರ್ಥಿಗಳು ಹಾಜರ್

ಆಳ್ವಾಸ್ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆ: 20134 ಅರ್ಜಿ ಸಲ್ಲಿಕೆ: 18,634 ವಿದ್ಯಾರ್ಥಿಗಳು ಹಾಜರ್


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2025-26ನೇ ಸಾಲಿನ, 6 ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ನಡೆಯಿತು. 

ರಾಜ್ಯಾದ್ಯಾಂತ 32 ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಗಡಿಭಾಗದ ಜಿಲ್ಲೆಯಾದ ಕಾಸರಗೋಡು ಹಾಗೂ ಮಹಾರಾಷ್ಟ್ರದ ಗಡಿಜಿಲ್ಲೆಗಳಿಂದ 20,134 ವಿದ್ಯಾರ್ಥಿಗಳು ಅನ್ಲೈನ್ ಮೂಲಕ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದರು, ಅದರಲ್ಲಿ 18,634 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು


35ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಯಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ವ್ಯವಸ್ಥಿತ ಶೌಚಾಲಯದೊಂದಿಗೆ ಉಚಿತ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. 6 ರಿಂದ 9ನೇ ತರಗತಿಯವರೆಗಿನ ಪಠ್ಯ ವಿಷಯಗಳು ಮತ್ತು ತಾರ್ಕಿಕ ಸಾಮರ್ಥ್ಯ ಸೇರಿ ಒಟ್ಟು 2 ಗಂಟೆ 30 ನಿಮಿಷದಂತೆ 150 ಅಂಕಗಳಿಗೆ ಪರೀಕ್ಷೆ ನಡೆದಿದೆ. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು 15 ವರ್ಷಗಳ ಹಿಂದೆ ಪ್ರಾರಂಭಿಸಿ ಸದ್ಯ 640 ವಿದ್ಯಾರ್ಥಿಗಳು ಸಂಪೂರ್ಣ ಉಚಿತ ಶಿಕ್ಷಣದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಶಾಲೆಗಾಗಿ ನಮ್ಮ ಪ್ರತಿಷ್ಠಾನ ಪ್ರತಿ ವಿದ್ಯಾರ್ಥಿಯ ಮೇಲೆ 1.30 ಲಕ್ಷದಂತೆ ಸುಮಾರು 8 ಕೋಟಿಯಷ್ಟು ಹಣವನ್ನು ವಿನಿಯೋಗಿಸುತ್ತಿದೆ. ಸರ್ಕಾರ, ಇಲಾಖೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ಮಾದರಿಯಾಗಿ ಪರಿಗಣಿಸಿ, ಇದೇ ರೀತಿಯ ಗುಣಾತ್ಮಕ ಶಿಕ್ಷಣವನ್ನು ನೀಡಿದರೆ ಕನ್ನಡ ಮಾಧ್ಯಮ ಶಾಲೆಗಳಿಗೆ ಎಂದು ಸೋಲಾಗದು. ನಮ್ಮ ರಾಜ್ಯದಲ್ಲಿರುವ ಹತ್ತು ಹಲವು ಶ್ರೀಮಂತ ಸಂಸ್ಥೆಗಳು, ಖಾಸಗಿ ಕಂಪೆನಿಗಳು, ಕಾರ್ಪೋರೇಟ್ ಸಂಸ್ಥೆಗಳು ಆಳ್ವಾಸ್ ಮಾದರಿಯ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಮುಂದೆ ಬರಬೇಕು. ತಮ್ಮ ಸಿಎಸ್‌ಆರ್ ಫಂಡ್‌ನ್ನು ಈ ನೆಲೆಯಲ್ಲಿ ವಿನಿಯೋಗಿಸಲು ಮನಸ್ಸು ಮಾಡಬೇಕು. ಈ ಸಂಸ್ಥೆಗಳು ತಮ್ಮ ಸಿಎಸ್‌ಆರ್ ಫಂಡ್‌ನ್ನು ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಅಥವಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅಭಿವೃದ್ಧಿಗೆ ಬಳಸಲು ಮುಂದೆ ಬಂದರೆ ತಾನೇ ಖುದ್ದಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಮಕ್ಕಳಿಗೆ ಈ ಕಾಲಕ್ಕುನುಗುಣವಾದ ಶಿಕ್ಷಣವನ್ನು ನೀಡಲು ಸಿದ್ದ. 


ಯಾರೇ ಒಬ್ಬ ವ್ಯಕ್ತಿ, ಸಂಘ ಸಂಸ್ಥೆ ಅಥವಾ ಸರಕಾರವಿರಬಹುದು ತನಗೆ ಇಂತಹ ಅವಕಾಶವನ್ನು ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡರೆ, ಅವರ ಹೆಸರಿನಲ್ಲಿ ತನ್ನ ಕ್ಯಾಂಪಸನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತಾನು ಉತ್ಸುಕನಾಗಿದ್ದೇನೆ. ಸರ್ಕಾರವು ಬಯಸಿದಲ್ಲಿ ಆಳ್ವಾಸ್ ಕ್ಯಾಂಪಸ್‌ನಲ್ಲೆ ಒಂದು ಮಾದರಿ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯಲು ಮುಂದೆ ಬಂದರೆ, ಈ ವರ್ಷದಲ್ಲೆ ಅಂತಹ ಶಾಲೆಯನ್ನು ಪ್ರಾರಂಭಿಸಲು ಸಿದ್ಧ ಎಂದರು. 


ಕನ್ನಡ ಮಾಧ್ಯಮ ಶಾಲೆಯಲ್ಲಿ 6 ರಿಂದ 9ನೇ ತರಗತಿಯವರೆಗೆ 640ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ಊಟ, ವಸತಿ ವ್ಯವಸ್ಥೆಯಲ್ಲಿ ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ. ವಾರ್ಷಿಕ ಈ ವಿದ್ಯಾರ್ಥಿಗಳ ಮೇಲೆ ಸಂಸ್ಥೆ ಸುಮಾರು 8 ಕೋಟಿಯಷ್ಟು ಹಣವನ್ನು ವ್ಯಯಿಸುತ್ತಿದೆ. ಈಗಾಗಲೇ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶೇಷ ಆದ್ಯತೆಯನ್ನು ನೀಡಿ ಪ್ರತ್ಯೇಕ ಆಯ್ಕೆ ಶಿಬಿರಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ -ಡಾ.ಎಂ ಮೋಹನ ಆಳ್ವ ತಿಳಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article