ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಅಂತರ್ ಕಾಲೇಜು ಖೋ-ಖೋ ಟೂರ್ನಮೆಂಟ್

ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಅಂತರ್ ಕಾಲೇಜು ಖೋ-ಖೋ ಟೂರ್ನಮೆಂಟ್

ದೇಸಿ ಕ್ರೀಡೆ ಖೋ-ಖೋ ಎಲ್ಲಾ ಕ್ರೀಡೆಗಳಿಗೆ ಅಡಿಪಾಯ: ಡಾ. ಜೆರಾಲ್ಡ್ ಡಿ’ಸೋಜಾ


ಮೂಡುಬಿದಿರೆ: ದೇಸಿ ಕ್ರೀಡೆ ಖೋ-ಖೋ ಎಲ್ಲಾ ಕ್ರೀಡೆಗಳಿಗೆ ಅಡಿಪಾಯವಿದ್ದಂತೆ. ಈ ಆಟವನ್ನು ಪ್ರೋತ್ಸಾಹಿಸುವ ಮೂಲಕ, ಯುವಜನತೆಯಲ್ಲಿ ಶಾರೀರಿಕ ಹಾಗೂ ಮಾನಸಿಕ ಸಿದ್ಧತೆಯನ್ನು ಹೆಚ್ಚಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಡಿ’ಸೋಜಾ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ-ಖೋ ಟೂರ್ನಮೆಂಟ್-2025  ಉದ್ಘಾಟಿಸಿ ಅವರು ಮಾತನಾಡಿದರು.


ಕ್ರೀಡಾ ಮನೋಭಾವ ನಮ್ಮನ್ನು ಈ ಕ್ಷೇತ್ರದಲ್ಲಿ ಹೆಚ್ಚಿನದ್ದನ್ನು ಸಾಧಿಸಲು ಸಹಕಾರಿಯಾಗುತ್ತದೆ. ಅಂತರ್ ಕಾಲೇಜು ಪಂದ್ಯಾಟವು ಎಲ್ಲಾ ಕ್ರೀಡಾಳುಗಳನ್ನು ಒಟ್ಟುಗೂಡಿಸುವ ಉದ್ದೇಶ ಹೊಂದಿರುತ್ತದೆ. ಪ್ರತಿಯೊಬ್ಬರೂ ಅವರವರ ಕ್ರೀಡಾ ಶಕ್ತಿಯ ಅನುಸಾರ ಪ್ರದರ್ಶನ ನೀಡಬೇಕು ಎಂದರು.

ಆಳ್ವಾಸ್ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹಿಂದೆಲ್ಲ ದೇಸಿ ಕ್ರೀಡೆಯಾದ ಖೋ-ಖೋ ಆಟವು ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು. ಆದರೆ, ಇಂದು ಕ್ರೀಡೆಯಲ್ಲಿನ ಬೆಳವಣಿಗೆಯು ದೇಸಿ ಕ್ರೀಡೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುವತ್ತ ಕೊಂಡೊಯ್ಯುತ್ತಿರುವುದು ಬಹಳ ಹೆಮ್ಮೆ ಮತ್ತು ಸಂತಸದ ಸಂಗತಿ ಎಂದರು.

ಕ್ರೀಡಾ ಕ್ಷೇತ್ರಕ್ಕೆ ಮಂಗಳೂರು ವಿಶ್ವವಿದ್ಯಾಲಯ ನೀಡುತ್ತಿರುವ ಪ್ರೋತ್ಸಾಹ, ಸಹಕಾರ ಸದಾ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡಾಪಟುಗಳಿಗೆ, ಕ್ರೀಡಾ ಪೋಷಕರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರಕುವಂತಾಗಲಿ ಎಂದು ಆಶಿಸಿದರು.

ಖೋ-ಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಸಂಸ್ಥೆಯ ಪ್ರತಿಭಾನ್ವಿತ ಕ್ರೀಡಾಪಟುಗಳಾದ ಮರಿಯಪ್ಪ, ದಿವ್ಯ ಕೆ.ಆರ್. ಮತ್ತು ನಿಖಿಲ್ ಬಿ. ಅವರನ್ನು ಗೌರವಿಸಲಾಯಿತು.  

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ, ಪ್ರಸನ್ನ ಕುಮಾರ್ ಬಿ.ಕೆ., ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಮಧು ಜಿ.ಆರ್. ಇದ್ದರು.

ಅಂತರ್ ಕಾಲೇಜು ಖೋ-ಖೋ ಟೂರ್ನಮೆಂಟ್‌ನಲ್ಲಿ ಪುರುಷರ ವಿಭಾಗದಿಂದ 18 ತಂಡ ಮತ್ತು ಮಹಿಳೆಯರ ವಿಭಾಗದಿಂದ 18 ತಂಡಗಳು ಭಾಗವಹಿಸಿದ್ದವು. 

ವಿದ್ಯಾರ್ಥಿನಿ ನಿಯಾ ಸೆಬಾಸ್ಟಿಯನ್ ನಿರೂಪಿಸಿ, ದೈಹಿಕ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಉದಯಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article