
ಭಜಕರ ಸಂತೃಪ್ತಿ ಶಿವನ ಸಂತೃಪ್ತಿಯನ್ನು ಸೂಚಿಸುತ್ತದೆ: ನಳಿನ್ ಕುಮಾರ್ ಕಟೀಲ್
ಪುತ್ತಿಗೆ ಸೋಮನಾಥೇಶ್ವರ ಸನ್ನಿಧಿಯಲ್ಲಿ ಮಹಿಷಮರ್ಧಿನಿ ಆಲಯ ಪುನಃ ಪ್ರತಿಷ್ಠೆ
ಮೂಡುಬಿದಿರೆ: ಜಿಲ್ಲೆಯಲ್ಲಿ ಧಾರ್ಮಿಕ ಪ್ರಜ್ಞೆಯ ಶ್ರೀಮಂತಿಕೆ, ಭಜಕರ ಆಡಂಬರದ ನಡುವೆ ದೇವಾಲಯಗಳ ಚಿಂತನೆಯಲ್ಲಿ ಪರಿವರ್ತನೆಯಾಗಿದೆ. ಈ ಸನ್ನಿಧಾನದಲ್ಲಿ ಎದ್ದು ಕಾಣುವ ಭಜಕರ ಸಂತೃಪ್ತಿ ಶಿವನ ಸಂತೃಪ್ತಿಯನ್ನು ಸೂಚಿಸುತ್ತಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೋಮವಾರ ಸಂಜೆ ಪುತ್ತಿಗೆಯ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಆಧ್ಯಾತ್ಮ ಆಸ್ತಿಕತೆಯನ್ನು ಬೆಳೆಸಿದರೆ ಆಧುನಿಕ ಶಿಕ್ಷಣದಲ್ಲಿ ನಾಸ್ತಿಕತೆಗೆ ಅವಕಾಶವಿದೆ ಎಂದರು.
ಶ್ರೀ ಜೈನಮಠ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶೈವ, ವೈಷ್ಣವ, ದ್ರಾವಿಡ ಹೀಗೆ ಹಲವು ಸಂಸ್ಕೃತಿಗಳಿಗೆ ಆಶ್ರಯವಿತ್ತ ಚೌಟ ಅರಸರ ಮನೆತನನಕ್ಕೆ ಸೇರಿದ ಪುತ್ತಿಗೆಯ ಸೋಮನಾಥನ ಸಾನಿಧ್ಯ ಅದ್ಭುತವಾಗಿ ಪುನಃನಿರ್ಮಾಣವಾಗಿದೆ. ಮೂಡುಬಿದಿರೆ ಜೈನ ಕಾಶಿಯಾದರೆ ಪುತ್ತಿಗೆ ದಕ್ಷಿಣಕನ್ನಡ ಜಿಲ್ಲೆಗೆ ಕಾಶಿಯಾಗಿ ಅರಳಿದೆ ಎಂದರು.
ಅವರು ಶೀ ವಿಶ್ವನಾಥನ ಕ್ಷೇತ್ರದಿಂದ ತಂದಿದ್ದ ಪ್ರಸಾದವನ್ನು ಕುಲದೀಪ್ ಚೌಟರಿಗೆ ನೀಡಿ ಶ್ರೀಗಳವರು ಗೌರವಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ಇತಿಹಾಸ ತಜ್ಞ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಮಾತನಾಡಿ, 12ರಿಂದ 18ನೇ ಶತಮಾನದವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ 13 ಅರಸುಮನೆತನಗಳ ಪೈಕಿ ಚೌಟ ಅರಸು ಮನೆತನದಲ್ಲಿ ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನನ್ನು ಸಂದರ್ಶಿಸಿ ಗೌರವಿತನಾದ ಮೂರನೇ ತಿರುಮಲ ರಾಯ ಚೌಟ , ಅವನ ಸೊಸೆ ರಾಣಿ ಅಬ್ಬಕ್ಕ ತುಳುನಾಡನ್ನೇ ಪೋರ್ಚುಗೀಸರ ದಾಳಿಯಿಂದ ರಕ್ಷಿಸಿದ ಧೀರೆ. ಧರ್ಮ ಸಮನ್ವಯದ ಸಂಸ್ಕೃತಿಯನ್ನು ಪೋಷಿಸಿದ ಈ ರಾಜಮನೆತನದ ಕೊಡುಗೆಗೆ ನಾವು ಕೃತಜ್ಞರಾಗಿರಬೇಕಿದೆ ಎಂದರು. ಪರಂಪರಾಗತ ಮೌಲ್ಯಗಳಿಗೆ ಒತ್ತು ನೀಡಿದ ನಡೆದಿರುವ ದೇವಳದ ನವನಿರ್ಮಾಣ ಇದೊಂದು ಮಾದರಿ ಎಂದವರು ಅಭಿಪ್ರಾಯಪಟ್ಟರು.
ಪುತ್ತಿಗೆ ಹಾಗೂ ಆಸುಪಾಸಿನ ಗ್ರಾಮಸ್ಥರ ಶ್ರಮದಾನ ಮೂರು ಕೋಟಿಗೂ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗಿದೆ ಎಂದು ಸುದರ್ಶನ ಎಂ. ಶ್ಲಾಘಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಡಿ.ಸುರೇಂದ್ರ ಕುಮಾರ್, ಚೌಟರ ಅರಮನೆ ವೀರೇಂದ್ರ ಎಂ. ಚಾವಡಿ ಮನೆ ಜಗನ್ನಾಥ ಶೆಟ್ಟಿ, ನಿಡೋಡಿ ಶ್ರೀ ಜಗನ್ನಾಥ ಡಿ. ಶೆಟ್ಟಿ, ಹಡಿಂಜೆಗುತ್ತು ಅಮರನಾಥ ಡಿ. ಶೆಟ್ಟಿ, ಕೆ.ಪಿ. ಜಗದೀಶ ಅಧಿಕಾರಿ, ಸುದರ್ಶನ ಎಂ, ವೈಭವ್ ಜಯರಾಮ ಹೆಗ್ಡೆ, ಕೊಡ್ಕಡ್ಕ ಶ್ರೀ ಸುದರ್ಶನ್ ಎಂ., ಮೂಡುಬಿದಿರೆ, ಎಂ. ಬಾಹುಬಲಿ ಪ್ರಸಾದ್, ವಜ್ರನಾಭ ಶೆಟ್ಟಿ ಅರ್ಕುಳಬೀಡು, ರಾಮಮೂರ್ತಿ ಉಡುಪ, ಕುಂಗೂರು, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ದೇವಳದ ಅಭಿವೃದ್ಧಿ ಕಾರ್ಯಗಳಲ್ಲಿ ಕೊಡುಗೆ ನೀಡಿದವರನ್ನು ಗೌರವಿಸಲಾಯಿತು.
ಉಪನ್ಯಾಸಕಿ ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭರತನಾಟ್ಯ, ನಾಟ್ಯ ವೈಭವ, ಗೀತಾ ಸಾಹಿತ್ಯ ಸಂಭ್ರಮ, ಸಂಗೀತ ಲಹರಿ, ಸಾಂಸ್ಕೃತಿಕ ಕಲಾಪಗಳು ಜರುಗಿದವು. ದಿನಪೂರ್ತಿ ಭಜನಾ ಕಾರ್ಯಕ್ರಮಗಳು ಜರುಗಿದವು.
ಅಮ್ಮನವರ ಆಲಯ ಪ್ರತಿಷ್ಠೆ:
ಸೋಮವಾರ ಪೂ. 5 ಗಂಟೆಯಿಂದ ವೈದಿಕ ಕಾರ್ಯಕ್ರಮದ ಅಂಗವಾಗಿ ದಿವಾಗಂಟೆ 7.49ರ ಮೀನ ಲಗ್ನ ಸುಮುಹೂರ್ತದಲ್ಲಿ ನೂತನ ದೇವಾಲಯದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರಿಗೆ ಹೊಸದಾಗಿ ಪ್ರತ್ಯೇಕ ಗುಡಿಯ ಶಿಖರ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ,ಮಹಾಗಣಪತಿ ಪ್ರತಿಷ್ಠೆ ಅಷ್ಟಬಂಧ ಲೇಪನ, ನಿದ್ರಾಕುಂಭಾಭಿಷೇಕ, ದೈವಗಳ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಕಲಶಾಭಿಷೇಕ, ಐಕ್ಯಮತ್ಯಭಾಗ್ಯಸೂಕ್ತ ಹೋಮ, ಪ್ರಾಯಶ್ಚಿತ್ತ ಹೋಮಗಳು ಜರಗಿದವು. ಸಂಜೆ 4 ಗಂಟೆಯಿಂದ ದಿಶಾಹೋಮಗಳು, ಬಲಿಶಿಲಾಪ್ರತಿಷ್ಠೆಗಳು, ಮಹಾಬಲಿಪೀಠ ಪ್ರತಿಷ್ಠೆ, ಕ್ಷೇತ್ರಪಾಲ ಪ್ರತಿಷ್ಠೆ, ದೈವಗಳಿಗೆ ಕಲಶಾಭಿಷೇಕ, ಪರ್ವಸೇವೆ ನಡೆಯಿತು.