ಮೂಡುಬಿದಿರೆಯಲ್ಲಿ ಸುಸಜ್ಜಿತ ಪ್ರಸಾದ್ ನೇತ್ರಾಲಯದ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ

ಮೂಡುಬಿದಿರೆಯಲ್ಲಿ ಸುಸಜ್ಜಿತ ಪ್ರಸಾದ್ ನೇತ್ರಾಲಯದ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ


ಮೂಡುಬಿದಿರೆ: ಕಣ್ಣು ದೇಹದ ವಿಶಿಷ್ಟವಾದ ಮತ್ತು ಸೂಕ್ಷ್ಮವಾದ ಭಾಗ. ಜೈನಕಾಶಿ ಮೂಡುಬಿದಿರೆಯು ಆದ್ಯಾತ್ಮಿಕ ಕೇಂದ್ರವಾಗಿದ್ದು ಇಲ್ಲಿನ ವೈದ್ಯರು ಅತ್ಯುತ್ತಮ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ. ಈಗಾಗಲೇ ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಪ್ರಸಾದ್ ನೇತ್ರಾಲಯವು ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡಿರುವುದು ಆಶಾದಾಯಕ ಬೆಳವಣಿಗೆ. ನಗರವಾಸಿಗಳಿಗೆ ಸಿಗುವ ಉತ್ತಮ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಮೂಡುಬಿದಿರೆ ತಾಲೂಕು ಹಾಗೂ ಅಸುಪಾಸಿನ ಗ್ರಾಮಾಂತರ ಜನರಿಗೂ ಸಿಗುವಂತಾಗಲಿ ಎಂದು ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

ಅವರು ಮೂಡುಬಿದಿರೆಯ ಬಡಗ ಬಸದಿ ಎದುರಿನ ಫಾರ್ಚೂನ್-2 ಕಟ್ಟಡದಲ್ಲಿ ಭಾನುವಾರ ಆರಂಭಗೊಂಡಿರುವ ಕರಾವಳಿ ಕರ್ನಾಟಕದ ಕಣ್ಣಿನ ಆಸ್ಪತ್ರೆಗಳ ದೊಡ್ಡ ನೆಟ್‌ವರ್ಕ್ ಹೊಂದಿರುವ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ಸುಸಜ್ಜಿತ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.


ಪ್ರಸಾದ್ ನೇತ್ರಾಲಯವು ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಅವಿಭಜಿತ ಜಿಲ್ಲೆಗೆ ಕೀರ್ತಿ ತಂದಿದೆ. ಶಿಬಿರಗಳ ಮೂಲಕ ಕಣ್ಣಿನ ತಜ್ಞ ವೈದ್ಯರನ್ನು ಗ್ರಾಮೀಣ ಭಾಗಗಳಿಗೆ ತಲುಪಿಸಿ ಕಣ್ಣಿನ ತಪಾಸಣೆ, ಜನರಲ್ಲಿ ಕಣ್ಣಿನ ಆರೋಗ್ಯದ ಕುರಿತು ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಆಸ್ಪತ್ರೆಯನ್ನು ಉದ್ಘಾಟಿಸಿದರು. ಕಣ್ಣಿನ ಸಣ್ಣಪುಟ್ಟ ದೋಷಗಳು ಬಂದಾಗ ನಿರ್ಲಕ್ಷ್ಯ ಮಾಡದೇ, ಸಕಾಲದಲ್ಲಿ ಚಿಕಿತ್ಸೆ, ವೈದ್ಯರ ಸಲಹೆ ಪಡೆದು ಮುಂದುವರೆಯಬೇಕು. ದೇಶದಲ್ಲಿ 3 ಕೋಟಿಗೂ ಅಧಿಕ ಜನರು ವಿವಿಧ ರೀತಿಯಲ್ಲಿ ಕಣ್ಣಿನ ದೋಷವನ್ನು ಹೊಂದಿದ್ದಾರೆ. ದೇಶದಲ್ಲಿ ಕಳೆದ ವರ್ಷ ೮೩ ಲಕ್ಷದಷ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದು, ಈ ವರ್ಷ 90 ಲಕ್ಷ ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಗುರಿಯನ್ನು ದೇಶದ ನೇತ್ರ ವೈದ್ಯರು ಹೊಂದಿದ್ದಾರೆ. ಇಂದು ತಂತ್ರಜ್ಞಾನದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿದೆ. ಪ್ರಸಾದ್ ನೇತ್ರಾಲಯವು ಕಣ್ಣಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ ಉತ್ತಮ, ನುರಿತ ವೈದ್ಯರನ್ನು ಹೊಂದಿದೆ ಎಂದರು.

ಶಾಸಕ ಉಮಾನಾಥ ಎ. ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನಾರೋಗ್ಯ ಪೀಡಿತರು ಸಮಸ್ಯೆಗಳನ್ನು ಹೇಳುವಾಗ, ಅದನ್ನು ಸರಿಯಾಗಿ ಕೇಳುವ ತಾಳ್ಮೆ ವೈದ್ಯರಲ್ಲಿ ಇರಬೇಕು. ವೈದ್ಯರ ಮಾರ್ಗದರ್ಶನ, ಮಾತುಗಳಿಂದ ರೋಗಿಗಳ ಶೇ.50 ಚಿಂತೆ ಕಡಿಮೆಯಾಗುತ್ತದೆ. ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಪ್ರಸಾದ್ ನೇತ್ರಾಲಯವು ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಸದಸ್ಯ ಪಿ.ಕೆ. ಥೋಮಸ್, ಉದ್ಯಮಿ ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಯಾಗಿದ್ದರು. 

ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 23 ವರ್ಷಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ, ಅದರಲ್ಲೂ 1 ಲಕ್ಷದಷ್ಟು ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. 6 ಸಾವಿರ ಕಣ್ಣಿನ ಉಚಿತ ಶಿಬಿರವನ್ನು ಮಾಡಿದ್ದೇವೆ. ಈ ಶಿಬಿರಗಳು ಕೇವಲ ಉಭಯ ಜಿಲ್ಲೆಗಳು ಅಲ್ಲದೇ ರಾಜ್ಯದ ಇತರ ಜಿಲ್ಲೆಗಳು, ನೆರೆಯ ರಾಜ್ಯಗಳಲ್ಲೂ ಆಯೋಜಿಸಿದ್ದೇವೆ. ವಿಶ್ವದ ನಂ.1 ಕಣ್ಣಿನ ಆಸ್ಪತ್ರೆಗಳಲ್ಲಿ ಇರುವ ಅತ್ಯಾಧುನಿಕ ತಂತ್ರಜ್ಞಾನವನ್ನು ನಾವು ಬಳಸುತ್ತಿದ್ದೇವೆ ಎಂದರು. 

ಆಸ್ಪತ್ರೆಯ ನಿರ್ಮಾಣಕ್ಕೆ ಸಹಕರಿಸಿದ ಆದಿತ್ಯ ಹಾಗೂ ರಾಜೇಶ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು. 

ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ನಿರ್ದೇಶಕರಾದ ರಘುರಾಮ್ ರಾವ್, ರಶ್ಮಿ ಕೃಷ್ಣಪ್ರಸಾದ್, ಪ್ರಸಾದ್ ನೇತ್ರಾಲಯ ಮೂಡುಬಿದಿರೆ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಸ್ಮೃತಿ, ಡಾ. ವಿಕ್ರಮ್ ಜೈನ್, ಡಾ. ಹರೀಶ್ ಉಪಸ್ಥಿತರಿದ್ದರು. 

ಪ್ರೊ. ಬಾಲಕೃಷ್ಣ ಮಡ್ಡೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article