ಅಧ್ಯಾತ್ಮ ಮತ್ತು ಜ್ಞಾನವೇ ಎಲ್ಲಕ್ಕಿಂತ ದೊಡ್ಡ ಸಂಪತ್ತು: ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ಅಧ್ಯಾತ್ಮ ಮತ್ತು ಜ್ಞಾನವೇ ಎಲ್ಲಕ್ಕಿಂತ ದೊಡ್ಡ ಸಂಪತ್ತು: ಶ್ರೀ ಈಶಪ್ರಿಯತೀರ್ಥ ಶ್ರೀಪಾದರು


ಬಂಟ್ವಾಳ: ಅಧ್ಯಾತ್ಮ ಮತ್ತು ಜ್ಞಾನವೇ ಎಲ್ಲಕ್ಕಿಂತ ದೊಡ್ಡ ಸಂಪತ್ತಾಗಿದೆ. ಭಗವಂತನು ಎಲ್ಲೆಡೆ ಇದ್ದಾನೆ, ಆದರೆ ನಮಗೆ ಆರಾಧನೆ ಮಾಡಲು ಸುಲಭವಾಗಲು ದೇವಸ್ಥಾನಗಳ ನಿರ್ಮಾಣವಾಗಿವೆ. ಸನಾತನ ಧರ್ಮದ ಅರ್ಥವೇ ತ್ಯಾಗವಾಗಿದೆ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಾ.೧೬ ರಂದು ಬಂಟ್ವಾಳದ ಬಿ.ಸಿ ರೋಡ್‌ನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದ ಸಮಾರೋಪದಲ್ಲಿ ಅವರು ಮಾತನಾಡಿದರು.


ನಮ್ಮ ಪಾರಮಾರ್ಥಿಕ ಸಾಧನೆಗಾಗಿ ಯಾವುದನ್ನು ಪಡೆಯಬೇಕೋ ಅಂತಹ ವಿಷಯವನ್ನು ಪಡೆದುಕೊಳ್ಳಲು ಬೇಕಾದ ಪರಿಸರ ನಿರ್ಮಾಣ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆಯೇ ಹಿಂದೂ ರಾಷ್ಟ್ರ. ಯಾರು ಸನ್ಮಾರ್ಗದಲ್ಲಿ ಚಲಿಸುತ್ತಾರೋ ಅವರು ಶ್ರೇಷ್ಠ ಎನಿಸುತ್ತಾರೆ ಮತ್ತು ಯಾರು ಇದರ ವಿರುದ್ಧ ಇದ್ದಾರೋ ಅವರು ದುಷ್ಟರೆನಿಸಿಕೊಳ್ಳುತ್ತಾರೆ ಎಂದರು.


ರಮಾನಂದ ಗೌಡ ಮಾತನಾಡಿ, ಇಂದು ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ವೈಚಾರಿಕ ಆಕ್ರಮಣ ನಡೆಯುತ್ತಿದೆ. ಇದಕ್ಕೆ ನರೇಟಿವ್ ವಾರ್ ಎಂದು ಹೇಳುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸನಾತನ ಸಂಸ್ಥೆಯು ಸನಾತನ ಸ್ಟಡಿ ಸೆಂಟರ್ ಎಂಬ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದೆ. ಇದರ ಸಹಾಯದಿಂದ ಅನೇಕ ವಕ್ತಾರರು ಅತ್ಯಂತ ಪ್ರಭಾವಿಯಾಗಿ ಟಿ.ವಿ. ಚಾನಲ್‌ಗಳಲ್ಲಿ ಹಿಂದೂ ವಿರೋಧಿ ಷಡ್ಯಂತ್ರವನ್ನು ಖಂಡಿಸುತ್ತಿದ್ದಾರೆ. ಅರ್ಬನ್ ನಕ್ಸಲವಾದದ ನಿಜವಾದ ಮುಖವಾಡವನ್ನು ಹಿಂದೂ ಸಮಾಜದ ಮುಂದೆ ಕಳಚಲಾಗುತ್ತಿದೆ ಎಂದು ಹೇಳಿದರು.

ಇಂದು ಮೆಕಾಲೆ ಶಿಕ್ಷಣ ಪದ್ಧತಿ, ಹಿಂದೂ ಅವಿಭಕ್ತ ಕುಟುಂಬದ ಸರ್ವನಾಶ ಮತ್ತು ಕೌಟುಂಬಿಕ ಮೌಲ್ಯಗಳ ಅಧಃಪತನ, ಭಾರತೀಯ ನಾಗರಿಕತ್ವವನ್ನು ತ್ಯಜಿಸುವವರ ಪ್ರಮಾಣದಲ್ಲಿ ಹೆಚ್ಚಳ, ಇಂತಹ ಅನೇಕ ಸಮಸ್ಯೆಗಳು ಸಮಾಜವನ್ನು ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಏಕೈಕ ಪರಿಹಾರವೆಂದರೆ ಆಧ್ಯಾತ್ಮಿಕ ಸಾಧನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಎಂದು ರಮಾನಂದ ಗೌಡ ಇವರು ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.

ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಧರ್ಮಜಾಗೃತಿ ಮೂಡಿಸುವ ಮಹಾನ್ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಬುದ್ಧಿಜೀವಿಗಳು ಮತ್ತು ಅಧಿಕಾರದ ಬಲವಿರುವವರು ಸಮಾಜದಲ್ಲಿ ಅಸ್ಥಿರತೆಯನ್ನು ನಿರ್ಮಾಣ ಮಾಡುತ್ತಿರುವ ಸಂಧಿಗ್ಧ ಪರಿಸ್ಥಿತಿಯಲ್ಲಿ ದೇಶ ಮತ್ತು ಧರ್ಮವನ್ನು ಉಳಿಸಲು, ಜನಸಾಮಾನ್ಯರಲ್ಲಿ ಧರ್ಮಜಾಗೃತಿ ಮೂಡಿಸಲು ಮಹೋನ್ನತ ಕಾರ್ಯವನ್ನು ಮಾಡುತ್ತಿದೆ. ಹಗಲು ರಾತ್ರಿ ಪರಿಶ್ರಮ ಪಡುತ್ತಿದೆ. ಇಂತಹ ಸಂಸ್ಥೆಗೆ ಪ್ರತಿಯೊಬ್ಬರೂ ತಮ್ಮ ಯೋಗದಾನವನ್ನು ನೀಡಿ ಈ ಮಹಾನ್ ಕಾರ್ಯದಲ್ಲಿ ಸಹಭಾಗಿಯಾಗಬೇಕಾಗಿದೆ ಎಂದು ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರು ಆಶೀರ್ವಚನ ನೀಡಿದರು. 

ಅಧಿವೇಶನದಲ್ಲಿ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ, ಅಂಬಿಕಾ ವಿಶ್ವವಿದ್ಯಾಲಯದಲಯದ ಸುಬ್ರಹ್ಮಣ್ಯ ನಟೋಜ, ಎಕ್ಸ್ ಏರ್ ಮಾರ್ಷಲ್ ರಮೇಶ್ ಕಾರ್ಣಿಕ್, ಡಾ ಶ್ರೀಧರ್, ಮಾಜಿ ಶಾಸಕರಾದ ರುಕ್ಮಯಿ ಪೂಜಾರಿ, ವೈಷ್ಣವಿ ಆದಿಶಕ್ತಿ ಸೇವಾ ಟ್ರಸ್ಟ್ ವಿಟ್ಲಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ, ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ದನ ಇಡ್ಯಾ ಮುಂತಾದ ಹಿಂದುತ್ವನಿಷ್ಠ ವೈದ್ಯರು, ವಕೀಲರು, ಉದ್ಯಮಿಗಳು, ಹಿಂದೂ ಸಂಘಟನೆಗಳ ಮುಖಂಡರು ಮತ್ತು ೮೦೦ಕ್ಕೂ ಅಧಿಕ ಜಾಗೃತ ಹಿಂದೂಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article