
ಅಕ್ರಮ ಪಿಸ್ತೂಲ್ ಹೊಂದಿದ್ದ ಪ್ರಕರಣ: ಮತ್ತೋರ್ವನ ಬಂಧನ
Sunday, March 16, 2025
ಮಂಗಳೂರು: ಅಕ್ರಮ ಪಿಸ್ತೂಲ್ ಹೊಂದುವ ಮೂಲಕ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ ಪಿಸ್ತೂಲ್ ಹಾಗೂ ಸಜೀವ ಮದ್ದುಗುಂಡು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಂಬಾರ್ ನಿವಾಸಿ ಅಬ್ದುಲ್ ಫೈಜಲ್ ಅಲಿಯಾಸ್ ಫೈಜು (26) ಬಂಧಿತ ಆರೋಪಿ. ಆತನನ್ನು ಮಂಜೇಶ್ವರ ಬಳಿಯ ಮೊರ್ತಾನದಲ್ಲಿ ಶನಿವಾರ ಬಂಧಿಸಿದ್ದೇವೆ. ಆತನಿಂದ ಒಂದು ಪಿಸ್ತೂಲ್, ಒಂದು ಸಜೀವ ಗುಂಡು, ಮೊಬೈಲ್ ಸೇರಿದಂತೆ ಒಟ್ಟು 2.10 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದೇವೆ ಎಂದರು.
ಈ ಪ್ರಕರಣ ಸಂಬಂಧ ಪೊಲೀಸರು ನಾಟೆಕಲ್‌ನ ನೌಫಲ್ ಮತ್ತು ಪೈವಳಿಕೆ ಸುಂಕದಕಟ್ಟೆಯ ಮನ್ಸೂರ್, ಕಾಸರಗೋಡು ಮಂಗಲ್ಪಾಡಿಯ ಅಬ್ದುಲ್ ಲತೀಫ್ ಅಲಿಯಾಸ್ ತೋಕ್ ಲತೀಫ್, ತಲಪಾಡಿ ಕಡಂಬಾರ್‌ನ ಮೊಹಮ್ಮದ್ ಅಸ್ಗರ್ ಮತ್ತು ಮೊಹಮ್ಮದ್ ಸಾಲಿಯನ್ನು ಈಚೆಗೆ ಬಂಧಿಸಿದ್ದರು. ಆರೋಪಿಗಳಿಂದ ಮೂರು ಪಿಸ್ತೂಲು ಮತ್ತು 12.9 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಆರೋಪಿಗಳಲ್ಲಿ ಅಬ್ದುಲ್ ಲತೀಫ್‌ಗೆ ಪಿಎಫ್‌ಐ ಜೊತೆ ನಂಟು ಇದೆ ಎಂದು ಪೊಲೀಸರು ತಿಳಿಸಿದ್ದರು.
ಆರೋಪಿ ಅಬ್ದುಲ್ ಫೈಜಲ್‌ಗೆ ಪಿಎಫ್‌ಐ ನಂಟು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಲ್ಲೆ ಸಂಬಂಧ ಈತನ ವಿರುದ್ಧ ಈ ಹಿಂದೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.