
ಹಿಂದೂ ಧಮ೯ದ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ: ನರಸಿಂಹ ಶೆಟ್ಟಿ ಮಾಣಿ
Sunday, March 16, 2025
ಮೂಡುಬಿದಿರೆ: ಅನ್ಯಾಯದ ವಿರುದ್ಧ ಎದ್ದು ನಿಂತು ಮಾತನಾಡಿದಾಗ ಧರ್ಮ ಉಳಿಯುತ್ತದೆ. ಹಿಂದೂ ಧರ್ಮದ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ ಆದ್ದರಿಂದ ಯುವಕರು ಉತ್ತಮ ಕೆಲಸ ಮಾಡುತ್ತಿದ್ದರೆ ಅವರನ್ನು ಕಟ್ಟಿ ಹಾಕದೆ ಪ್ರೋತ್ಸಾಹಿಸೋಣ ಎಂದು ಮಂಗಳೂರು ಗ್ರಾಮಾಂತರ ಹಿಂದೂ ಜಾಗರಣ ವೇದಿಕೆಯ ನರಸಿಂಹ ಶೆಟ್ಟಿ ಮಾಣಿ ಹೇಳಿದರು.
ಅವರು ನಮ್ಮ ಜವನೆರ್ ಇರುವೈಲು ಇದರ ದಶಮಾನೋತ್ಸವ ಹಾಗೂ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂಗಳು ಮತ್ಸರ, ಜಾತಿ ವ್ಯವಸ್ಥೆಯನ್ನು ಬಿಟ್ಟು ನಾವೆಲ್ಲರೂ ಒಗ್ಗಟ್ಟಾದರೆ ಹಿಂದೂ ಸಮಾಜವನ್ನು ಯಾರೂ ಒಡೆಯಲು ಸಾಧ್ಯವಿಲ್ಲ. ಒಬ್ಬ ತಾಯಿ ಜಾಗೃತಿಯಾದರೆ ಒಂದು ಮನೆ, ಗ್ರಾಮ ಉಳಿಯಲು ಸಾಧ್ಯವಿದೆ. ಹಾಗಾಗಿ ನಮ್ಮ ಮನೆಯ ಮಕ್ಕಳಿಗೆ ಸಂಸ್ಕಾರವನ್ನು ನೀಡುವಂತಹ ಕೆಲಸ ಮಾಡಿ ಎಂದ ಅವರು ಯಾರೂ ವ್ಯಕ್ತಿಯ ಅಭಿಮಾನಿಯಾಗಬೇಡಿ, ಧರ್ಮದ, ದೇಶದ ಅಭಿಮಾನಿಗಳಾಗಿ ಎಂದು ಸಲಹೆ ನೀಡಿದರು.
ಮಂಗಳೂರು ಗ್ರಾಮಾಂತರ ಹಿಂದೂ ಜಾಗರಣ ವೇದಿಕೆ ಸಂಯೋಜಕ ಸಮಿತ್‌ರಾಜ್ ದರೆಗುಡ್ಡೆ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಜೆ. ಶೆಟ್ಟಿ, ಉದ್ಯಮಿ ಜಯಪ್ರಕಾಶ್ ಮಾರ್ನಾಡ್, ‘ನಮ್ಮ ಜವನೆರ್ ಇರುವೈಲ್’ ಇದರ ಅಧ್ಯಕ್ಷ ಪ್ರಶಾಂತ ಆಚಾರ್ಯ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಂತೋಷ್ ಪುಚ್ಚೇರಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು.