
ಹೆಜಮಾಡಿ ಬಂದರು ನಿರ್ಮಾಣ: ನಡಿಕುದ್ರು ಗ್ರಾಮಸ್ಥರ ಅಳಲು ಆಲಿಸಿದ ತಹಶಿಲ್ದಾರ್ ಪ್ರತಿಭಾ ಆರ್.
ಪಡುಬಿದ್ರಿ: ಈ ಪ್ರದೇಶ ನಡಿಕುದ್ರು ದ್ವೀಪದ ದಕ್ಷಿಣ ಭಾಗ ಶಾಂಭವಿ ಹಾಗೂ ನಂದಿನಿ ನೀರು ಕಡಲಿಗೆ ಸೇರುವ ಪ್ರದೇಶವಾಗಿದ್ದು, ಈ ಹಿಂದೆ ಪ್ರಕೃತಿದತ್ತವಾದ ಅಳಿವೆಯಾಗಿದ್ದು, ನದಿ ನೀರು ಸರಾಗವಾಗಿ ಹರಿದು ಯಾವುದೇ ಸಮಸ್ಯೆಗಳು ಬರುತ್ತಿರಲಿಲ್ಲ. ಬಂದರು ಕಾಮಗಾರಿ ಪ್ರಾರಂಭವಾಗಿ ಇದೀಗ ಪ್ರಕೃತಿದತ್ತವಾದ ಅಳಿವೆಯನ್ನು ಮುಚ್ಚಿ ಅಳಿವೆಯ ಹಿಂದಿನ ಉತ್ತರಭಾಗದಲ್ಲಿ ಅಳಿವೆ ನಿರ್ಮಿಸಿ, ಬ್ರೇಕ್ ವಾಟರ್ ನಿರ್ಮಾಣ ಕಾರ್ಯ ನಡೆದು ಉಳಿದ ಕಾಮಗಾರಿ ಸ್ಥಗಿತಗೊಂಡಿವೆ.
2021ರಲ್ಲಿ ತೌಖ್ತೆ ಚಂಡಮಾರುತದ ಪರಿಣಾಮ ಪ್ರಕ್ಷುಬ್ಧಗೊಂಡ ಸಮುದ್ರದ ನೀರು ಭಾರಿ ಪ್ರಮಾಣವಾಗಿ ಹೆಚ್ಚಳವಾಗಿ ತೆರೆಗಳು ಅಪ್ಪಳಿಸಿ ಭಾರೀ ಮಳೆಯಿಂದಾಗಿ ಕೃಷಿ ಭೂಮಿಗೆ ಸಮುದ್ರದ ಉಪ್ಪು ನೀರು ಪ್ರವೇಶಿಸಿ, ಬೆಳೆ ಹಾನಿಯಾಗಿರುತ್ತದೆ. ಇದರಿಂದಾಗಿ ನಡಿಕುದ್ರು ಪ್ರದೇಶದ ಕೃಷಿಕರಿಗೆ ಕುಡಿಯುವ ನೀರು ಮತ್ತು ಭತ್ತದ ಬೆಳೆ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 60 ಎಕರೆಗೂ ಮಿಕ್ಕಿ ಅಧಿಕ ಕೃಷಿ ಭೂಮಿ ಹಾಗೂ 30 ಬಾವಿಗಳಿಗೆ ಹಾನಿ ಉಂಟಾಗಿತ್ತು.
ಲಕ್ಷಾಂತರ ರೂ. ಖರ್ಚು ಮಾಡಿ ಬಿತ್ತನೆಗಾಗಿ ಗೊಬ್ಬರ ಹಾಕಿ ಹದಗೊಳಿಸಿದ ಕೃಷಿ ಭೂಮಿ ಉಪ್ಪು ನೀರು ತುಂಬಿ ಬಿತ್ತನೆ ಮಾಡಲಾಗದೆ ಉಪ್ಪು ನೀರು ಇಂಗಿ ಭತ್ತ ಬೆಳೆಯುವುದೇ ಕಷ್ಟಕರವಾಗಿತ್ತು.
ಗ್ರಾಮಸ್ಥರ ಬೇಡಿಕೆಗಳು: ‘ತಡೆಗೋಡೆ ನಿರ್ಮಾಣವಾಗಬೇಕು’:
ಕೃತಕ ಅಳಿವೆಯ ಕಾಮಗಾರಿ ಪೂರ್ತಿಯಾಗದೆ ಶಾಂಭವಿ ನದಿಯ ನೀರು ಸರಾಗವಾಗಿ ಹರಿಯದೆ ನೆರೆ ಭೀತಿ ಉಂಟಾಗಿದೆ. ನದಿ ನೀರು ಉಕ್ಕೇರಿ ಬಂದು ಮನೆ, ತೋಟ ಜಲಾವೃತವಾಗುವ ಸಾಧ್ಯತೆ ಇರುವುದರಿಂದ ಉತ್ತಮ ವೈಜ್ಞಾನಿಕ ರಕ್ಷಣಾ ತಡಗೋಡೆಯ ನಿರ್ಮಾಣವಾಗಬೇಕು. ಡ್ರೆಡ್ಜಿಂಗ್ ಮಾಡಿದಾಗ ಉಪ್ಪು ನೀರು ಹರಿದು ಬಂದು ಬೆಳೆ ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ತಹಶಿಲ್ದಾರ್ ಡಾ. ಪ್ರತಿಭಾ ಆರ್. ಬಂದರು ಕಾಮಗಾರಿಯ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಳಲು ಆಲಿಸಿದರು. ನಮಗೆ ಅಭಿವೃದ್ಧಿಯೂ ಮುಖ್ಯ ಸ್ಥಳೀಯರ ಹಿತವೂ ಮುಖ್ಯ ಹೆಜಮಾಡಿ ಕಡಲತಡಿಯಲ್ಲಿ ಮಹತ್ವಾಕಾಂಕ್ಷೆಯ ಬಂದರು ಕಾಮಗಾರಿ ಅತ್ಯುತ್ತಮವಾಗಿ ನಿರ್ಮಾಣಗೊಳ್ಳುತ್ತಿದೆ. ಆದರೆ ಅಲ್ಲಿಯ ನಡಿಕುದ್ರು ಸ್ಥಳೀಯ ನಿವಾಸಿಗಳು ಈ ಬಂದರು ಕಾಮಗಾರಿಯ ಡ್ರೆಡ್ಜಿಂಗ್ ಸಮಯದಲ್ಲಿ ಉಪ್ಪು ನೀರು ಹರಿದು ಬೆಳೆ ಹಾಳಾಗುತ್ತಿರುವುದರ ಬಗ್ಗೆ ನಮಗೆ ಮನವಿ ನೀಡಿದ್ದಾರೆ. ಸುರಕ್ಷಿತ ತಡೆಗೋಡೆ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಷಯವನ್ನು ಬಂದರು ಇಲಾಖೆಯ ಗಮನಕ್ಕೆ ತರಲಾಗುವುದು. ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಕಾಯ್ದುಕೊಂಡು ಕಾಮಗಾರಿ ಮುಂದುವರಿಸಲು ಸೂಚನೆ ನೀಡಲಾಗುವುದು. ನಮಗೆ ಅಭಿವೃದ್ಧಿ ಯೋಜನೆಯೂ ಮುಖ್ಯ, ಸ್ಥಳೀಯರ ಹಿತವೂ ಮುಖ್ಯ ಎಂದು ಪತ್ರಿಕೆಗೆ ತಿಳಿಸಿದರು.
ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ವಿಎಓ ಶ್ರೀಕಾಂತ್, ಸ್ಥಳೀಯರಾದ ಸುಧೀರ್ ಕರ್ಕೇರ, ವಾಮನ ಪೂಜಾರಿ, ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.