ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಪಕ ಸಂವಹನ-ಆವಿಷ್ಕಾರದ ಚಿಂತನೆಗಳನ್ನು ಹುಟ್ಟು ಹಾಕಬೇಕು: ಡಾ. ಪೀಟರ್ ಮಚಾದೋ

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಪಕ ಸಂವಹನ-ಆವಿಷ್ಕಾರದ ಚಿಂತನೆಗಳನ್ನು ಹುಟ್ಟು ಹಾಕಬೇಕು: ಡಾ. ಪೀಟರ್ ಮಚಾದೋ


ಪುತ್ತೂರು: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಶಕ್ತಿ ಮತ್ತು ಸಬಲೀಕರಣದ ಚಿಂತನೆಯನ್ನು ಬೆಳೆಸಬೇಕು. ಶಿಕ್ಷಣ ಪದ್ಧತಿ ಮಕ್ಕಳನ್ನು ಜ್ವಾಲೆಯಾಗಿ ಆಕರ್ಷಿಸುವಂತಿರಬೇಕು. ಸ್ಪರ್ಧಾತ್ಮಕ ಹಾಗೂ ವಿಮರ್ಶಾತ್ಮಕ ಚಿಂತನೆ, ಜೀವನ ಪರ‍್ಯಂತ ಕಲಿಕೆ ಮತ್ತು ಸಮರ್ಪಕ ಸಂವಹನ-ಆವಿಷ್ಕಾರದ ಚಿಂತನೆಗಳನ್ನು ಹುಟ್ಟು ಹಾಕುವ ಶಿಕ್ಷಣ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವಾಯತ್ತ ಸಂತ ಫಿಲೋಮಿನಾ ಕಾಲೇಜು ಸಾಗುತ್ತದೆ ಎಂದು ಬೆಂಗಳೂರು ಮಹಾನಗರ ಮೆಟ್ರೋಪೊಲಿಟನ್ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಮಚಾದೋ ಆಶಯ ವ್ಯಕ್ತಪಡಿಸಿದರು. 


ಶನಿವಾರ ಮಂಗಳೂರು ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಧೀನದ ಪುತ್ತೂರು ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಘೋಷಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಅತೀ ವಂ. ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಮಾತನಾಡಿ, ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ನೀಡುವುದು ಶಿಕ್ಷಣವೆಂಬ ಸಂಸ್ಕಾರ. ನಾವು ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಮಾಜದ ಎಲ್ಲರನ್ನೂ ಪ್ರೀತಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಹೃದಯ ವೈಶಾಲ್ಯತೆಯ ಜತೆಗೆ ವಿದ್ಯೆ ಮತ್ತು ವಿನಯವೂ ಅಗತ್ಯ. ನಾವು ಬೆಳೆಯುವ ಮೂಲಕ ಇತರರನ್ನೂ ಬೆಳೆಸುವ ಮನೋಭಾವ ಸಮಾಜದಲ್ಲಿ ಮೂಡಬೇಕು. ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಈ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿದ ಹಲವರ ಕನಸಾಗಿದೆ. ಈ ಕನಸು ಇಂದು ನನಸಾಗಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.


ಸ್ವಾಯತ್ತ ಕಾಲೇಜಿನ ಲಾಂಛನ ಹಾಗೂ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶಿಕ್ಷಣದಿಂದ ವಂಚಿತರಾಗಿದ್ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಸ್ಕಾರಭರಿತ ಶಿಕ್ಷಣ ನೀಡಿದ ಖ್ಯಾತಿ ಫಿಲೋಮಿನಾ ಕಾಲೇಜಿನದ್ದಾಗಿದೆ. ಪ್ರಶ್ನಿಸುವ ನಾಗರಿಕರನ್ನು ಸಮಾಜಕ್ಕೆ ನೀಡಿದ ಈ ಸಂಸ್ಥೆ ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ರಾಷ್ಟ್ರಕ್ಕೆ ಪ್ರಜ್ಞಾವಂತ ನಾಯಕರನ್ನು ನೀಡುವ ಮೂಲಕ ಸ್ವಾಭಿಮಾನದ ಬದುಕಿಗೆ ಪೂರಕ ವಿದ್ಯೆ ನೀಡಿದ ಫಿಲೋಮನಾ ಮುಂದೆ ವಿಶ್ವವಿದ್ಯಾಲಯವಾಗಿ ಬೆಳಗಬೇಕು ಎಂದರು.  


ಸ್ವಾಯತ್ತ ಕಾಲೇಜಿನ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಪಿ.ಎಲ್ ಧರ್ಮ ಅವರು ಮಾತನಾಡಿ, ಇಂದಿನ ಭಾಷೆ ಹಾಗೂ ಶೈಲಿಯಲ್ಲಿ ನಾವು ಪ್ರೀತಿಯ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ. ಅದಕ್ಕಾಗಿ ತಲೆಗೆ ಕೆಲಸ ಕೊಡುವ ಸಾಹಿತ್ಯದ ಸಿಲೆಬಸ್ ಗಳು ಅಳವಡಿಕೆಯಾಗಬೇಕು. ಮನಸ್ಸುಗಳನ್ನು ಕಟ್ಟುವ, ಎಲ್ಲರನ್ನೂ ಒಂದಾಗಿಸುವ, ಹೃದಯಗಳನ್ನು ಬಂಧಿಸುವ ಭಾಷಾಶಾಸ್ತ್ರಗಳನ್ನು ಫಿಲೋಮಿನಾ ಸ್ವಾಯತ್ತ ಕಾಲೇಜು ತನ್ನ ಸಿಲೆಬಸ್ ಗಳಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು ಎಂದರು. 


ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಅವರು ‘ಫಿಲೊಜೆನೆಸಿಸ್’ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಫಿಲೋಮಿನಾ ಕಾಲೇಜು ತನ್ನ ಅರ್ಹತೆಯ ಹಿನ್ನಲೆಯಲ್ಲಿ ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದೆ ಎಂದರು.


ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ ಶುಭ ಹಾರೈಸಿದರು. ಕ್ಯಾಥೊಲಿಕ್ ಶಿಕ್ಷಣಮಂಡಳಿಯ ನಿಕಟಪೂರ್ವ ಕಾರ್ಯದರ್ಶಿ ವಂ. ಆಂಟನಿ ಮೈಕೆಲ್ ಶೆರಾ, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ. ಕವಿತಾ ಕೆ.ಆರ್., ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾತನಾಡಿದರು. 


ವೇದಿಕೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ವಂ. ಮ್ಯಾಕ್ಸಿಮ್ ನೊರೊನ್ಹಾ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ.ಎಂ. ಅಬ್ದುಲ್ ಉಪಸ್ಥಿತರಿದ್ದರು.


ಕಾಲೇಜಿನ ಸಂಚಾಲಕರಾದ ಅತೀ.ವಂ. ಲಾರೆನ್ಸ್ ಮಸ್ಕರೇನಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ವಂ. ಆಂಟನಿ ಪ್ರಕಾಶ್ ಮೊಂತೆರೊ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. 


ಗೌರವಾರ್ಪಣೆ:

ಸ್ವಾಯತ್ತ ಕಾಲೇಜಿಗೆ ರಿಜಿಸ್ಟ್ರಾರ್ ಆಗಿ ನೇಮಕಗೊಂಡ ಡಾ. ನಾರ್ಬರ್ಟ್ ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ, ಹಣಕಾಸು ಅಧಿಕಾರಿ ಡಾ. ಎಡ್ವಿನ್ ಎಸ್. ಡಿ’ಸೋಜ, ಶೈಕ್ಷಣಿಕ ಉಪ ಕುಲಸಚಿವ ವಿಪಿನ್‌ನಾಯಕ್ ಎನ್.ಎಸ್. ಹಾಗೂ ಪರೀಕ್ಷಾಂಗ ಉಪಕುಲಸಚಿವರುಗಳಾದ ಜೋನ್ಸನ್ ಡೇವಿಡ್ ಸಿಕ್ವೇರಾ ಮತ್ತು ಅಭಿಷೇಕ್ ಸುವರ್ಣ ಅವರನ್ನು ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ. ಡಾ. ಪ್ರವೀಣ್ ಲಿಯೋ ಲಸ್ರಾದೊ ಅವರು ಸನ್ಮಾನಿಸಿದರು. ಸ್ವಾಯತ್ತ ಸ್ಥಾನಮಾನಕ್ಕೆ ಕೊಡುಗೆ ನೀಡಿದ ಭಾನುಪ್ರಕಾಶ್ ಹಾಗೂ ಅಪೇಕ್ಷಾ ಅವರನ್ನು ಗೌರವಿಸಲಾಯಿತು. 


ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ:

ಅತಿಥಿಗಳನ್ನು ಎನ್‌ಸಿಸಿ ಕೆಡೆಟ್‌ಗಳ ಗೌರವ ರಕ್ಷೆ ಮತ್ತು ಯಕ್ಷನೃತ್ಯದ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ‘ಕಾಲೇಜಿನ ಪರಂಪರೆಯ ಒಂದು ನೋಟ’ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ನಡೆದ ‘ಅಟಾನಮಿ ಇವ್ ಗಾಲಾ’ ವಿಶೇಷ ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ಇಂಡಿಯಾ ಖ್ಯಾತಿಯ ಜಸ್ಕರಣ್ ಸಿಂಗ್, ಝೀ ಸರಿಗಮಪಾ ಖ್ಯಾತಿಯ ಸಮನ್ವಿ ರೈ, ಎದೆ ತುಂಬಿ ಹಾಡಿದೆನು ಖ್ಯಾತಿಯ ನಾದಿರಾ ಬಾನು ಕಲಾವಿದರಾದ ಸುಪ್ರೀತ್, ಮಲ್ಲಿಕಾ ಮಟ್ಟಿ ಜೋಗಿ ಅವರು ಭಾಗವಹಿಸಿದ್ದರು. ಸಾ. ಫಿಲೋಮಿನಾ ಸಂಸ್ಥೆ ಅಭಿವೃದ್ಧಿಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದ ವಂ.ಜೆರಾಲ್ಡ್ ಡಿಸೋಜ, ವಂ.ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಪ್ರೊ.ಲೊಬೋ ನೊರೊನ್ಹಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿರಾರು ವಿದ್ಯಾರ್ಥಿಗಳು, ಫೋಷಕರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article