
ಭರವಸೆ ನೀಡಿ ಮೋಸ ಮಾಡಿದ ಬಜೆಟ್: ಮಾಜಿ ಶಾಸಕ ಸಂಜೀವ ಮಠಂದೂರು
ಪುತ್ತೂರು: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಪುತ್ತೂರಿಗೆ ಹೊಸ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಈಗಿರುವ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಪುತ್ತೂರಿನ ಶಾಸಕರ ಗೌರವ ಹಾಗೂ ಬೇಡಿಕೆ ‘ಠುಸ್ಸ್’ ಆಗಿದೆ. ಬಜೆಟ್ ನಲ್ಲಿ ಮಾಡಿರುವ ಈ ಘೋಷಣೆ ಪುತ್ತೂರಿನ ಶಾಸಕರನ್ನು ತೃಪ್ತಿ ಪಡಿಸಲು ಮಾಡಿದ ತಂತ್ರಗಾರಿಕೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಯಿಸಿದ ಅವರು ಪುತ್ತೂರಿನ ಶಾಸಕರ ಮಾತಿಗೆ ರಾಜ್ಯದ ಮುಖ್ಯಮಂತ್ರಿ ಮನ್ನಣೆ ಕೊಡುತ್ತಾರೆ ಎಂದು ಜನತೆ ಭಾವಿಸಿದ್ದರು. ಆದರೀಗ ಅದು ಸುಳ್ಳಾಗಿದೆ. ಚಿತ್ರದುರ್ಗದ ಮೊಳಕಾಲ್ಮೂರು, ಕೊಡಗಿನ ವಿರಾಜಪೇಟೆ ಯಲ್ಲಿನ ಆಸ್ಪತ್ರೆಗಳ ಉನ್ನತೀಕರಣಕ್ಕೆ ಸ್ಪಷ್ಟವಾದ ಮಾಹಿತಿ ನೀಡಿದ್ದಾರೆ. ಆದರೆ ಪುತ್ತೂರಿಗೆ ಯಾವುದೇ ಸ್ಪಷ್ಟತೆ ಇಲ್ಲದ ಭರವಸೆ ಮಾತ್ರ ನೀಡಿದ್ದಾರೆ. ಮೆಡಿಕಲ್ ಕಾಲೇಜು ಕೊಡುವುದಿದ್ದರೆ ಅದಕ್ಕೆ ಇಷ್ಟು ಅನುದಾನ ಕೊಡುತ್ತೇವೆ. ಇಷ್ಟು ಬೆಡ್ ನ ಆಸ್ಪತ್ರೆ ನೀಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಬೇಕಿತ್ತು. ಆದರೆ ಬಜೆಟಿನಲ್ಲಿ ಅದ್ಯಾವ ವಿಚಾರಗಳ ಪ್ರಸ್ತಾಪವೇ ಇಲ್ಲ. ಶಾಸಕರ ಒತ್ತಡಕ್ಕಾಗಿ ಭರವಸೆ ನೀಡಿ ಪುತ್ತೂರಿನ ಜನತೆಗೆ ಮೋಸ ಮಾಡಿದ ಬಜೆಟ್ ಆಗಿದೆ ಎಂದವರು ಹೇಳಿದ್ದಾರೆ.
ಸಹಕಾರಿ ಸಂಘದಲ್ಲಿ ರೈತರಿಗೆ ನೀಡಲಾಗುವ ಸಾಲಸೌಲಭ್ಯಕ್ಕೆ ಕತ್ತರಿ ಹಾಕಿದ್ದಾರೆ. ಕೃಷಿ-ತೋಟಗಾರಿಕೆ ಕೇವಲ 7145 ಕೋಟಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಕೇವಲ ಶೇ.3 ರಷ್ಟು ಮಾತ್ರ ನೀಡಲಾಗಿದೆ. ಪಶ್ಚಿಮವಾಹಿನಿ ಯೋಜನೆಯ ಪ್ರಸ್ತಾಪವೇ ಇಲ್ಲ. ಒಟ್ಟಿನಲ್ಲಿ ಇದೊಂದು ಜನವಿರೋಧಿ ಬಜೆಟ್ ಆಗಿದೆ ಎಂದವರು ತಿಳಿಸಿದರು.