
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಗೇನೊದ ಬೊಟ್ಟು’
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಸಂತ ಫಿಲೋಮಿನ ಕಾಲೇಜು ತುಳು ಸಾಹಿತ್ಯ ಸಂಘದ ಆಶ್ರಯದಲ್ಲಿ ‘ಗೇನೊದ ಬೊಟ್ಟು-ಮೌಖಿಕ ಜನಪದ ಒರಿಪಾವುನ ನಿಲೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಸ್ನಾತಕೋತ್ತರ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ತುಳು ಭಾಷೆ ಸಂಸ್ಕೃತಿಯ ಅರಿವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ಮೂಡಿ ಬಂದ ಅಪೂರ್ವ ಉಪನ್ಯಾಸ ಎಲ್ಲರಲ್ಲೂ ತುಳು ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕುಂಬ್ರಾ ದುರ್ಗ ಪ್ರಸಾದ ರೈ ಅವರು ಉದ್ಘಾಟನೆ ನೆರವೇರಿಸಿ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ವಿಶೇಷ ಉಪನ್ಯಾಸ ನೀಡಿದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕಿ ಜಯಲಕ್ಷ್ಮಿ ರಾಜೇಂದ್ರ ಶೆಟ್ಟಿ, ಮೌಖಿಕ ಜನಪದ ಪ್ರಕಾರಗಳು ಮತ್ತು ಇತರ ಆಚರಣೆಗಳಿಂದ ಪಡೆಯುವ ಜೀವನ ಮೌಲ್ಯಗಳು ಮತ್ತು ವೈಜ್ಞಾನಿಕವಾದ ಸಂಗತಿಗಳನ್ನು ಅರಿತುಕೊಳ್ಳಬೇಕೆಂದು ನುಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಕ ಡಾ. ಮಾಧವ ಎಂ.ಕೆ. ತುಳು ಪೀಠದ ರಚನಾತ್ಮಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಪ್ರಾಚಾರ್ಯರಾದ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಅಧ್ಯಕ್ಷತೆ ವಹಿಸಿ ತುಳು ಭಾಷೆ ತುಳುನಾಡಿನ ಜನರ ಮನದ ಭಾಷೆ. ಸರ್ವಮತದವರು ಹೃದಯದಿಂದ ಒಪ್ಪಿಕೊಂಡ ಭಾಷೆ ಮತ್ತು ತುಳು ಸಂಸ್ಕೃತಿಯ ಉಳಿವಿಗಾಗಿ ನಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿಕುನ್ನ ತಾಕೋಡೆ ಮತ್ತು ಉಪಪ್ರಾಚಾರ್ಯ ಡಾ. ವಿಜಯಕುಮಾರ್ ಮೊಳೆಯಾರ್ ಉಪಸ್ಥಿತರಿದ್ದರು.
ತುಳು ಸಾಹಿತ್ಯ ಸಂಘದ ಸಂಯೋಜಕರಾದ ಪ್ರಶಾಂತ ರೈ ಸ್ವಾಗತಿಸಿ, ಅಕ್ಷತಾ ಬಿ. ರೈ ವಂದಿಸಿದರು. ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ತುಳು ಪೀಠದ ಪ್ರಸಾದ ಅವರು ಕಾರ್ಯಕ್ರಮ ನಿರೂಪಿಸಿದರು.