
ಕರಾವಳಿಯಲ್ಲಿ ರೇಬಿಸ್‌ಗೆ ಮಹಿಳೆ ಬಲಿ
ಸುಳ್ಯ: ನಾಯಿಮರಿಯೊಂದು ಕಡಿತಕ್ಕೊಳಗಾಗಿದ್ದ ಮಹಿಳೆಯೊಬ್ಬರು ರೇಬಿಸ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಸುಳ್ಯ ಗಡಿಭಾಗ ಸಂಪಾಜೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆ ಸಾವಿಗೀಡಾದವರು. ಈಕೆ ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದಾಗ ನಾಯಿ ಮರಿಯೊಂದು ಕಚ್ಚಿತ್ತು. ಆದರೆ ಮಹಿಳೆ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಹಾಗೂ ಚಿಕಿತ್ಸೆಯನ್ನೂ ಪಡೆದಿರಲಿಲ್ಲ. ಮಾ.17 ರಂದು ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದಲ್ಲದೆ, ವಿಚಿತ್ರವಾಗಿ ವರ್ತಿಸತೊಡಗಿದ್ದರು. ಹಾಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು.
ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ ತೋರುತ್ತಿದ್ದ ಆಕೆಯೊಂದಿಗೆ ವೈದ್ಯರು ಪೂರಕ ಮಾಹಿತಿ ಕೇಳಿದಾಗ ನಾಯಿ ಕಚ್ಚಿದ್ದ ಬಗ್ಗೆ ತಿಳಿಸಿದ್ದರು. ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಾ. ೨೦ರಂದು ಮಹಿಳೆ ಮೃತಪಟ್ಟಿದ್ದಾರೆ. ಇತ್ತ ಆ ನಾಯಿ ಮರಿ ಕಾಣದಾಗಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ನಾಯಿ ಸಂಪರ್ಕಕ್ಕೆ ಬಂದ ಎಲ್ಲರೂ ಏಂಟಿ ರೇಬಿಸ್ ಚುಚ್ಚುಮದ್ದು ಪಡೆಯುವಂತೆ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ಸೂಚಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಮಹಿಳೆಗೆ ರೇಬಿಸ್ ಇರುವುದು ದೃಢವಾಗಿದೆ. ಮಹಿಳೆಗೆ ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.