
ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ
ಉಜಿರೆ: ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಸ್ಥಳಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂಡಾಜೆ ಗ್ರಾ ಪಂ ವ್ಯಾಪ್ತಿಯಲ್ಲಿ ನೇತ್ರಾವತಿ, ಮೃತ್ಯುಂಜಯ ನದಿ, ರಾಷ್ಟ್ರೀಯ ಹೆದ್ದಾರಿ, ಮುಂಡಾಜೆ- ಕಾಪು ರಕ್ಷಿತಾರಣ್ಯ ಇತ್ಯಾದಿ ಗಳಿದ್ದು ಅಲ್ಲಿಯ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ.
ಪ್ರಥಮ ಹಂತದಲ್ಲಿ ಕಾಪು ಕಿಂಡಿ ಅಣೆಕಟ್ಟು,ದಿಡುಪೆ ರಸ್ತೆ,ನಿಡಿಗಲ್ ನೇತ್ರಾವತಿ ನದಿ, ಸೇತುವೆ, ಸೀಟು ಅರಣ್ಯ ಪ್ರದೇಶದ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಲಾಗಿದೆ. ಅಲ್ಲಿಯ ನದಿಗಳು, ಅರಣ್ಯ, ಸೇತುವೆ, ಕಿಂಡಿ ಅಣೆಕಟ್ಟುಗಳ ಪ್ರದೇಶದಲ್ಲಿ ಸಾರ್ವಜನಿಕರು ಕಸ, ತ್ಯಾಜ್ಯವನ್ನು ತಂದು ಹಾಕುವುದು ಸಾಮಾನ್ಯವಾಗಿದೆ. ಇದರಿಂದ ಪಂಚಾಯಿತಿಯ ಹೆಚ್ಚಿನ ಸಂಪನ್ಮೂಲ ತ್ಯಾಜ್ಯ ವಿಲೇವಾರಿಗೆ ವ್ಯಯವಾಗುತ್ತಿದೆ.
ಸ್ಥಳೀಯರು ಸಹಿತ ಇತರ ಗ್ರಾಮಗಳ ಪೇಟೆಗಳಿಂದ ಮುಂಡಾಜೆ ಗ್ರಾ ಪಂ ವ್ಯಾಪ್ತಿಯ ಹಲವೆಡೆ ತ್ಯಾಜ್ಯ ತಂದು ಹಾಕುವುದು ಅಭ್ಯಾಸವಾಗಿದೆ. ಅಲ್ಲದೆ ಇಲ್ಲಿನ ಸೇತುವೆ,ನದಿ ಪ್ರದೇಶಗಳಲ್ಲಿ ಸಾಕಷ್ಟು ಅನಗತ್ಯ ಚಟುವಟಿಕೆಗಳು ಕಂಡುಬರುತ್ತವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದೆ.ಸಿ ಸಿ ಕ್ಯಾಮೆರಾಗಳ ದೃಶ್ಯಾವಳಿಗಳು ಪಂಚಾಯಿತಿ ವ್ಯವಸ್ಥೆಗೆ ಹಾಗೂ ಸಂಬಂಧ ಪಟ್ಟ ವ್ಯಕ್ತಿಗಳ ಮೊಬೈಲ್ ಗಳಲ್ಲಿ ದಾಖಲಾಗುವುದರಿಂದ ಅನಗತ್ಯ ಚಟುವಟಿಕೆ ನಡೆಸುವವರನ್ನು ಹಾಗು ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಲು ಅನುಕೂಲವಾಗಿದೆ . ಮುಂದಿನ ಹಂತದಲ್ಲಿ ಇಲ್ಲಿನ ರುದ್ರಭೂಮಿ ಸಹಿತ ಇನ್ನಷ್ಟು ಸ್ಥಳಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸುವ ಕುರಿತು ಯೋಚಿಸಲಾಗಿದೆ ಎಂದು ಗ್ರಾ ಪಂ ಅಧ್ಯಕ್ಷ ಗಣೇಶ್ ಬಂಗೇರ ಹಾಗೂ ಪಿಡಿಒ ಗಾಯತ್ರಿ ತಿಳಿಸಿದ್ದಾರೆ.