
‘ಫರ್ಟಿಲಿಟಿ ಕ್ಲಿನಿಕ್’ನಲ್ಲಿ ಚಿಕಿತ್ಸೆ ಪಡೆದ 43 ದಂಪತಿಗಳಿಗೆ ಸಂತಾನ ಭಾಗ್ಯ
ಉಳ್ಳಾಲ: ಬಂಜೆತನ ನಿವಾರಣೆ ನಿಟ್ಟಿನಲ್ಲಿ ಮೂರು ವರ್ಷಗಳ ಹಿಂದೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆರಂಭಿಸಲಾದ ‘ಜೆನೆಸಿಸ್ ಫರ್ಟಿಲಿಟಿ ಕ್ಲಿನಿಕ್’ನಲ್ಲಿ ಚಿಕಿತ್ಸೆ ಪಡೆದ 43 ದಂಪತಿಗಳಿಗೆ ಸಂತಾನ ಭಾಗ್ಯ ಲಭಿಸುವ ಮೂಲಕ ಅಭೂತಪೂರ್ವ ಯಶಸ್ಸು ದಾಖಲಿಸಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಫಲಾನುಭವಿಗಳ ಜೊತೆ ಶುಕ್ರವಾರ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೂ ಮಾತನಾಡಿ, ಮಾರ್ಚ್ 8, 2022ರಂದು ವಿಶ್ವ ಮಹಿಳಾ ದಿನಾಚರಣೆಯಂದು ಅಂದಿನ ಆಡಳಿತಾಧಿಕಾರಿ ವಂದನೀಯ ರೋಶನ್ ಕ್ರಾಸ್ತಾ ನೇತೃತ್ವದಲ್ಲಿ ‘ಜೆನೆಸಿಸ್-ಫರ್ಟಿಲಿಟಿ ಕ್ಲಿನಿಕ್’ ಆರಂಭಿಸಲಾಗಿತ್ತು. ಚಿಕಿತ್ಸೆಗಾಗಿ 91 ಮಂದಿ ನೊಂದಾಯಿಸಿದ್ದು, ಚಿಕಿತ್ಸೆಯಿಂದ 43 ಮಂದಿ ದಂಪತಿಗೆ ಸಂತಾನ ಭಾಗ್ಯ ಒದಗಿ ಬಂದಿದೆ. 27 ಮಂದಿ ಚಿಕಿತ್ಸೆ ಮುಂದುವರಿಸಿದ್ದರೆ, 21 ಮಂದಿ ವಿವಿಧ ಕಾರಣಗಳಿಂದ ಚಿಕಿತ್ಸೆ ನಿಲ್ಲಿಸಿದ್ದಾರೆ ಎಂದು ತಿಳಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗ ಡಾ. ವಿಲ್ಮಾ ಡಿಸೋಜ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹೊರರೋಗಿ ವಿಭಾಗದಲ್ಲಿ ಬೆಳಗ್ಗೆ 8.45ರಿಂದ ಸಾಯಂಕಾಲ 4 ರವರೆಗೆ ವೈದ್ಯರು ಲಭ್ಯರಿರುತ್ತಾರೆ.
ಸಂತಾನೋತ್ಪತ್ತಿ ಆರೈಕೆಯನ್ನು ಸಮಗ್ರವಾಗಿ ಒದಗಿಸುವುದು, ಸಲಹೆ ಮತ್ತು ಸಮಾಲೋಚನೆಯ ಮೂಲಕ ಸಮಗ್ರ ಆರೋಗ್ಯ ರಕ್ಷಣೆ ನೀಡುವುದು. ಸಮರ್ಥ ಮತ್ತು ಅನುಭವಿ ವೈದ್ಯರಿಂದ ದಂಪತಿಗಳಿಗೆ ಹೋಮಿಯೋಪಥಿ ಚಿಕಿತ್ಸೆಯ ಮೂಲಕ ವ್ಯಕ್ತಿಗತ ಆರೈಕೆಯಿಂದ ತಾವು ಪೋಷಕರಾಗುವ ಕನಸ್ಸನ್ನು ನನಸಾಗಿಸಲು ಜಾಗೃತಿ ಮೂಡಿಸುವುದು ಕ್ಲಿನಿಕ್‌ನ ಉದ್ದೇಶ ಎಂದರು.
ವಂ.ಫಾ. ರೋಶನ್ ಕ್ರಾಸ್ತಾ ಮಾತನಾಡಿ, ಹೊಮಿಯೋಪತಿ ಚಿಕಿತ್ಸಾ ವಿಧಾನದಲ್ಲಿಯೂ ಈ ರೀತಿಯ ಫಲಿತಾಂಶ ಬಂದಿರುವುದು ನಿಜಕ್ಕೂ ಶಾಘನೀಯ. ಈ ವಿಚಾರ ವ್ಯಾಪಕ ಪ್ರಚಾರ ಪಡೆಯಬೇಕು. ಹೊಮಿಯೋಪಥಿಯಿಂದಾದ ಉಪಯೋಗದ ಬಗ್ಗೆ ಫಲಾನುಭವಿಗಳು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಅವರ ಬಾಳಿಗೂ ಬೆಳಕಾಗಬೇಕು ಎಂದರು.
ಫಾಧರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಉಪ ಆಡಳಿತಾಧಿಕಾರಿ ವಂದನೀಯ ಅಶ್ವಿನ್ ಕ್ರಾಸ್ತಾ, ಹೋಮಿಯೋಪಥಿ ಸಂಸ್ಥೆಯ ಆಡಳಿತಾಧಿಕಾರಿ ರೋಶನ್ ಕ್ರಾಸ್ರಾ, ಡಾ.ನೆಲ್ಸನ್ ಧೀರಜ್ ಪಾಯ್ಸ್, ಫಾಧರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭುಕಿರಣ್, ಜೆನೆಸಿಸ್ ಫರ್ಟಿಲಿಟಿ ಕ್ಲಿನಿಕ್‌ನ ಸಂಯೋಜಕಿ ಡಾ. ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ, ಡಾ. ದೀಪಾ ಪಾಯಿಸ್, ಎಫ್.ಎಮ್. ಒಪಿಎಸ್‌ನ ಪ್ರಾಂಶುಪಾಲ ಡಾ. ಸತೀಶ್, ಮಾಧ್ಯಮ ಸಮಿತಿ ಸಂಯೋಜಕಿ ಡಾ. ಶರ್ಲಿನ್ ಇ.ಪೌಲ್, ಡಾ. ಜೆನಿಟಾ ಫೆರ್ನಾಂಡಿಸ್, ಡಾ. ಸಾವಿಯೋನಾ ಫೆರ್ನಾಂಡಿಸ್, ಡಾ. ಅನಿತಾ ಲೋಬೋ ಹಾಗೂ ಫಲಾನುಭವಿ ದಂಪತಿಗಳು ಉಪಸ್ಥಿತರಿದ್ದರು.