
ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ವಿವಾಹವಾಗಿ: ಚಕ್ರವರ್ತಿ ಸೂಲಿಬೆಲೆ
ಉಳ್ಳಾಲ: ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ವಿವಾಹವಾಗಿ ಎಂದು ಖ್ಯಾತ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಹಿಂದೂ ಸಮಾಜದ ಐಕ್ಯತೆ, ಲೋಕ ಕಲ್ಯಾಣಾರ್ಥವಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರದಂದು ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ ಐದನೇ ವರುಷದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಬೃಹತ್ ಪಾದಾಯಾತ್ರೆಯ ಸಮಾರೋಪ ಸಭೆಯಲ್ಲಿ ಅವರು ಧಿಕ್ಸೂಚಿ ಭಾಷಣಗೈದರು.
ವಕ್ಫ್ ಆಸ್ತಿಯ ನವೀಕರಣಕ್ಕೆ 150 ಕೋಟಿ ರೂ. ನೀಡಿರುವ ರಾಜ್ಯ ಸರಕಾರ ಪ್ರಚೋದನೆ ನೀಡಿ ಪ್ರತ್ಯೇಕತೆಯನ್ನು ಹುಟ್ಟುಹಾಕುವ ಪ್ರಯತ್ನಕ್ಕೆ ಮುಂದಾಗಿದೆ. 100 ಉರ್ದು ಶಾಲೆಗಳಿಗೆ 400 ಕೋಟಿ ರೂ. ವಕ್ಫ್ ವಿರುದ್ಧ ಇಡೀ ದೇಶ ಹೋರಾಟ ನಡೆಸುತ್ತಿರುವ ಸಂದರ್ಭ ಕರ್ನಾಟಕ ಸರಕಾರ, ವಕ್ಫ್ ಆಸ್ತಿಯ ನವೀಕರಣಕ್ಕೆ 150 ಕೊಟಿ ರೂ. ನೀಡಲು ಒಪ್ಪಿದೆ. ಮುಸ್ಲಿಂ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯಲು ಪರೀಕ್ಷೆ ಬರೆಯುವ ಶುಲ್ಕದ ಐವತ್ತು ಶೇಕಡ ಮರುಪಾವತಿ ಮಾಡಲಾಗುತ್ತದೆ.ವಿದೇಶದಲ್ಲಿ ಅಧ್ಯಯನ ನಡೆಸಲು 25 ರಿಂದ 30 ಲಕ್ಷ ರೂ., ಮುಸ್ಲಿಂ ವಿದ್ಯಾರ್ಥಿಗೆ ಕೊಡಲಾಗುತ್ತದೆ. ಕರ್ನಾಟಕದಲ್ಲಿ ಹಿಂದುಗಳಿಗೆ ಏನೂ ಇಲ್ಲದಂತಾಗಿದೆ. ಹಾಗಾಗಿ ಹಿಂದುತ್ವವವನ್ನು ಗೌರವಿಸುವ ವ್ಯಕ್ತಿಗಳು ನಾಡನ್ನು ಆಳಿದರೆ ಮಾತ್ರ ಹಿಂದೂ ಧರ್ಮ ಸುದೀರ್ಘವಾಗಿ ಬಾಳಲಿದೆ ಎಂದು ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮತಾಂತರವಾದವರನ್ನು ಮತ್ತೆ ಘರ್ ವಾಪಸೀ ಮಾಡುವ ಪ್ರಯತ್ನಕ್ಕೆ ಹಿಂದೂ ಯುವಕರನ್ನು ತರಬೇತು ಗೊಳಿಸಬೇಕು ಎಂದರು.
2013 ರ ಪವಿತ್ರ ಕುಂಭ ಮೇಳದ ಉಸ್ತುವಾರಿಯಾಗಿ ಅಂದಿನ ಸರಕಾರ ಅಝಮ್ ಖಾನ್ ನೇಮಿಸಿತ್ತು. ಮುಸಲ್ಮಾನನ ಉಸ್ತುವಾರಿಗಿಂತ ಓರ್ವ ಹಿಂದೂ ಯೋಗಿಯ ಉಸ್ತುವಾರಿಯಲ್ಲಿ ನಡೆಯುವ ಕುಂಭಮೇಳವು ಯಾವ ರೀತಿಯ ಯಶಸ್ಸು ಕಾಣಬಹುದೆಂಬುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೋರಿಸಿಕೊಟ್ಟಿದ್ದಾರೆ ಎಂದರು.
ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ, ಕೊರಗಜ್ಜನ ಭಕ್ತೆಯಾಗಿರುವ ಶತಾಯುಷಿ ತಿಪಟೂರಿನ ಶಿವಮ್ಮ(103)ಅವರು ಪಾದಾಯಾತ್ರೆಯಲ್ಲಿ ಭಾಗವಹಿಸಿ ಗಮನಸೆಳೆದರು.
ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ ಗೋಪಾಲ ಕುತ್ತಾರು, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಹೆಚ್.ಕೆ. ಪುರುಷೋತ್ತಮ, ಹಿರಿಯರಾದ ಕುತ್ತಾರಗುತ್ತು ರತ್ನಾಕರ ಕಾವ, ಪಂಜಂದಾಯ ಬಂಟ ವೈದ್ಯನಾಥ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜಯರಾಮ ಭಂಡಾರಿ, ಪ್ರಮುಖರಾದ ವಿನೋದ್ ಶೆಟ್ಟಿ ಬೊಲ್ಯಗುತ್ತು ಮತ್ತಿತರರು ಉಪಸ್ಥಿತರಿದ್ದರು.
ವಿಹಿಂಪ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರು ಸ್ವಾಗತಿಸಿ, ಪ್ರವೀಣ್ ಬಸ್ತಿ ಮತ್ತು ಆಶಿಕ್ ಗೋಪಾಲಕೃಷ್ಣ ನಿರೂಪಿಸಿದರು.