
ಕಳವು ಆರೋಪಿಯ ಬಂಧನ
Monday, April 21, 2025
ಬಂಟ್ವಾಳ: ಫರಂಗಿಪೇಟೆ ಜಂಕ್ಷನ್ ನಲ್ಲಿರುವ ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಹಣವನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಡ್ಯಾರ್-ಕಣ್ಣೂರು ನಿವಾಸಿ ನಝೀರ್ ಮಹಮ್ಮದ್ (26) ಬಂಧಿತ ಆರೋಪಿ.
ಫರಂಗಿಪೇಟೆ ಜಂಕ್ಷನ್ ನಲ್ಲಿರುವ ವಿಶ್ವಾಸ ಸಿಟಿ ಸೆಂಟರ್‌ನ ವೈಟ್ ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಗೆ ಎ.11 ರಂದು ರಾತ್ರಿ ನುಗ್ಗಿ ಕ್ಯಾಶ್ ಕೌಂಟರ್‌ನಲ್ಲಿದ್ದ ನಗದು 4 ಲ.ರೂ. ಕಳವುಗೈಯಲಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಯಿಂದ ನಗದು 1,09,490 ರೂ. ಹಾಗೂ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿದ್ದಾರೆ.
ಆರೋಪಿ ನಝೀರ್ ಮಹಮ್ಮದ್ 2024ನೇ ವರ್ಷದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಟಿವಿಎಸ್ ಶೋರೂಂ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲೂ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.