
ತಂಡದಿಂದ ಅಕ್ರಮ ಪ್ರವೇಶಗೈದು ಮನೆ ದ್ವಂಸ
ಬಂಟ್ವಾಳ: ಸುಮಾರು 10 ರಿಂದ 15 ಮಂದಿಯ ತಂಡವೊಂದು ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಎಂಬಲ್ಲಿ ಕುಮ್ಕಿ ಜಮೀನಿಗೆ ಅಕ್ರಮ ಪ್ರವೇಶಗೈದು ಕಾರ್ಮಿಕರೋರ್ವರು ವಾಸ್ತವ್ಯವಿದ್ದ ಗುಡಿಸಲು ಮನೆಯನ್ನು ಧ್ವಂಸಗೈದ ಘಟನೆ ನಡೆದಿದೆ.
ಇಲ್ಲಿನ ಲೋಕೇಶ್ ನಾಯ್ಕ ಅವರ ವಾಸವಿದ್ದ ಮನೆಯನ್ನು ಸಂಪೂರ್ಣ ಧ್ವಂಸಮಾಡಲಾಗಿದ್ದು, ಸ್ಥಳೀಯರಾದ ಕೃಷ್ಣಪ್ಪ, ತಿಮ್ಮಪ್ಪ, ಶ್ರೀಧರ, ರಂಜಿತ್, ಮತ್ತಿತರರು ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶಗೈದು ಅಮಾನವೀಯವಾದ ಈ ಕೃತ್ಯ ಎಸಗಿದ್ದಲ್ಲದೆ ಲೋಕೇಶ್ ಹಾಗೂ ಅವರ ಪತ್ನಿಗೆ ಜೀವಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲಿಪಾದೆ ಎಂಬಲ್ಲಿ ಲವೀನ ಅರ್ಹಾನ ಅವರ ರಬ್ಬರ್ ತೋಟವನ್ನು ಸುಮಾರು 14 ವರ್ಷಗಳಿಂದ ನೋಡಿಕೊಂಡು ಅಲ್ಲೇ ವಾಸ್ತವ್ಯವಿರುವ ಲೋಕೇಶ್ ನಾಯ್ಕ್ ದಂಪತಿ ಸುಮಾರು 6 ತಿಂಗಳ ಹಿಂದೆ ಲವೀನ ಅರ್ಹಾನರವರ ವರ್ಗ ಜಾಗದ ಕುಮ್ಕಿ ಜಾಗದಲ್ಲಿ ಶೆಡ್‌ನಂತಹ ಮನೆ ನಿರ್ಮಿಸಿ ವಾಸವಿದ್ದಾರೆ.
ಭಾನುವಾರ ಆರೋಪಿಗಳು ಏಕಾಏಕಿ ಅಕ್ರಮ ಪ್ರವೇಶಗೈದು ಮನೆಯನ್ನು ಕೆಡವಿಹಾಕಿದಲ್ಲದೆ ಇಲ್ಲಿ ವಾಸ ಮಾಡಿದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ನಡುವೆ ಜಮೀನಿನ ವಿವಾದಕ್ಕೆ ಸಂಬಂಧಿಸಿ ಲೋಕೇಶ್ ನಾಯ್ಕ್ ದಂಪತಿ ವಿರುದ್ಧವು ಗ್ರಾಮಾಂತರು ಪೊಲೀಸರಿಗೆ ಪ್ರತಿದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತಂಡಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವೇಳೆ ಲೋಕೇಶ್ ನಾಯ್ಕ್ ಮನೆತನದಲ್ಲಿದ್ದು, ಇವರ ಪತ್ನಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಕರ್ತವ್ಯದಲ್ಲಿದ್ದ ಪೊಲೀಸರು ದೂರು ಸ್ವೀಕರಿಸದೆ ವಾಪಾಸ್ ಕಳುಹಿಸಿದ ಪ್ರಸಂಗವು ನಡೆದಿದ್ದು, ಬಳಿಕ ಅವರ ಪತಿ ಲೊಕೇಶ್ ನಾಯ್ಕ್ ಅವರೇ ಬಂದು ದೂರು ನೀಡಬೇಕಾಯಿತು.
ಮನೆಯನ್ನು ಕಳಕೊಂಡಿರುವ ಸಂತ್ರಸ್ಥ ದಂಪತಿಗೆ ತಾತ್ಕಲಿಕ ನೆಲೆಯಲ್ಲಿ ವಾಸ್ತವ್ಯಕ್ಕೆ ಲವೀನ ಅರ್ಹಾನರವರು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.