
ಅಪಘಾತ: ಗಾಯಾಳು ಸಾವು
Tuesday, April 8, 2025
ಸುಬ್ರಹ್ಮಣ್ಯ: ಕಾರು ಹಾಗೂ ದ್ವಿಚಕ್ರ ವಾಹನದ ನಡುವಿನ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ವರದಿಯಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೆ.ವಿ. ವರ್ಗೀಸ್ ಎಂಬವರ ಪುತ್ರ ಕೆ.ವಿ. ಪ್ರದೀಪ್ (34) ಮೃತರು.
ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಪ್ರದೀಪ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಾ.19ರಂದು ತನ್ನ ಸಂಸ್ಥೆಯ ಕೆಲಸದ ನಿಮಿತ್ತ ಸುಬ್ರಹ್ಮಣ್ಯದಿಂದ ಗುಂಡ್ಯ ಕಡೆಗೆ ತೆರಳುವ ವೇಳೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಎದುರು ಭಾಗದಿಂದ ಒಂದು ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಪ್ರದೀಪ್ ಅವರ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಪ್ರದೀಪ್ ರಸ್ತೆಗೆ ಬಿದ್ದು ಪ್ರದೀಪ್ ಅವರ ಬಲಕಾಲಿಗೆ ಮತ್ತು ಎಡಕಾಲಿಗೆ, ಎಡಭುಜಕ್ಕೆ ತೀವ್ರ ಗಾಯವಾಗಿತ್ತು. ತೀವ್ರ ಗಾಯಗೊಂಡ ಪ್ರದೀಪ್ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಏ.8 ರಂದು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.