
ಬಂಟ್ವಾಳದಾದ್ಯಂತ ಬೀಕರ ಗಾಳಿ, ಮಳೆ ತೆಂಗಿನಮರ ಬಿದ್ದು ಪಾರಾದ ಸ್ಕೂಟರ್ ಸವಾರ, ಹಲವೆಡೆ ಮನೆಗೆ ಹಾನಿ
Wednesday, April 9, 2025
ಬಂಟ್ವಾಳ: ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುಂಟರಗಾಳಿ ಮಾದರಿಯಲ್ಲಿ ಬೀಕರ ಗಾಳಿ, ಮಳೆಗೆ ಹಲವೆಡೆಯಲ್ಲಿ ಹಾನಿಯಾಗಿದ್ದು, ಮಾಣಿ-ಪುತ್ತೂರು ರಸ್ತೆಯ ನೇರಳಕಟ್ಟೆಯಲ್ಲಿ ತೆಂಗಿನಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರನೋರ್ವ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಸಂಭವಿಸಿದೆ.
ಸುಮಾರು 4.30 ರ ವೇಳೆಗೆ ಬೀಸಿದ ಸುಂಟರಗಾಳಿಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆಯಲ್ಲದೆ ವಿವಿಧ ಗ್ರಾಮಗಳಲ್ಲಿ ಮನೆಯ ಛಾವಣಿಯು ಹಾರಿಹೋಗಿದೆ. ಅನೇಕ ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ರಸ್ತೆ ಬದಿ ಹಾಕಲಾದ ಪ್ಲೆಕ್ಸ್‌ಗಳು ಧರೆಗುರುಳಿವೆ.
ಬಿ.ಸಿ. ರೋಡಿನ ಶ್ರೀರಕ್ತೇಶ್ವರೀ ದೇವಸ್ಥಾನದ ಬ್ರಹ್ಮಕಲಶದ ಹಿನ್ನಲೆಯಲ್ಲಿ ಅನ್ನಛತ್ರಕ್ಕಾಗಿ ಅಳವಡಿಸಲಾದ ಶಾಮಿಯಾನ ಧರೆಗರುಳಿದರೆ, ಸಾಂಸ್ಕೃತಿಕ ವೇದಿಕೆಯಲ್ಲಿ ಯಕ್ಷ ತೆಲಿಕೆ ಕಾರ್ಯಕ್ರಮವು ನಡೆಯುತ್ತಿದ್ದು, ಶಾಮಿಯಾನದ ತಗಡುಶೀಟೋಂದು ನೆಲಕ್ಕುರಳಿತ್ತು. ಈ ಸಂದರ್ಭದಲ್ಲಿ ಯಕ್ಷತೆಲಿಕೆಯ ಹಾಸ್ಯ ಕಾರ್ಯಕ್ರಮದ ವೀಕ್ಷಣೆಯಲ್ಲಿ ತಲ್ಲಿನರಾಗಿದ್ದ ಪ್ರೇಕ್ಷಕರು ಒಂದೊಮ್ಮೆ ಚೆಲ್ಲಾಪಿಲ್ಲಿಯಾದರು. ಮಳೆ ನಿಂತ ಬಳಿಕ ಯಕ್ಷತೆಲಿಕೆ ಮುಂದುವರಿಯಿತು.
ಗಾಳಿ ಮಳೆಗೆ ಬಾಳ್ತಿಲ ಗ್ರಾಮದ ಬೇಬಿ ನಲ್ಕೆಯವರ ವಾಸ್ತವ್ಯದ ಮನೆಯ ಶೀಟು ಛಾವಣಿಗೆ ಹಾನಿಯಾಗಿರುತ್ತದೆ.
ನೆಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ತೆಂಗಿನ ಮರ ಹಾಗೂ ವಿದ್ಯುತ್ ಕಂಬ, ವಿದ್ಯುತ್ ತಂತಿಗಳು ಧರಾಶಾಹಿಯಾಗಿದ್ದು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು. ನಾವೂರು ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಮಹಮ್ಮದ್ ಇಸಾಕ್ ಅವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ.
ಅದೇ ರೀತಿ ನಾವೂರು ಗ್ರಾಮದ ಮೈಂದಲ ನಿವಾಸಿ ಇಲ್ಯಾಸ್ ಅವರ ಮನೆ ಮೇಲ್ಛಾವಣಿ ಹಾನಿಯಾದರೆ ಇದೇ ಸ್ಥಳದ ಮೇರಿ ಡಿಸೋಜ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಗಾಳಿಗೆ ಬಿ.ಸಿ. ರೋಡಿನ ಖಾಸಗಿ ಬಸ್ ತಂಗುದಾಣದಲ್ಲಿನ ಮರಗಳು ನೆಲಕ್ಕೆ ಉರುಳುವಷ್ಟರ ಮಟ್ಟಿಗೆ ಬಾಗಿದ ಹಾಗೂ ಈ ಸಂದರ್ಭ ಬಸ್ ತಂಗುದಾಣದಲ್ಲಿದ್ದ ಪ್ರಯಾಣಿಕರು ಸೇಫ್ ಜಾಗ ಹುಡುಕಿಕೊಂಡು ಓಡುವ ವೀಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿದೆ.
ಗಾಳಿ ಮಳೆಯಿಂದ ಅಪಾರ ನಷ್ಟವುಂಟಾಗಿರುವ ಬಗ್ಗೆ ವರದಿಯಾಗಿದೆ. ಉರಿ ಬಿಸಿಲಿನ ಮಧ್ಯೆಯು ಸುಂಟರಗಾಳಿ ಮಾದರಿಯ ಹಠಾತ್ ಗಾಳಿ, ಮಳೆ ಜನರನ್ನು ಕಂಗಾಲಾಗಿಸಿತಲ್ಲದೆ ಕೊಂಚ ತಂಪನ್ನುಂಟುಮಾಡಿತು.