
10 ವರ್ಷಗಳ ಹಿಂದಿನ ಜೋಡಿ ಕೊಲೆ: ಮೂವರು ದೋಷಿಗಳು
ಮಂಗಳೂರು: ನಗರದ ಅತ್ತಾವರದ ಬಾಡಿಗೆ ಮನೆಯೊಂದರಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಕೇರಳದ ತಲಶೇರಿಯ ನಾಫೀರ್ (24) ಮತ್ತು ಕಲ್ಲಿಕೋಟೆಯ ಫಹೀಮ್ (25) ಕೊಲೆ ಪ್ರಕರಣದಲ್ಲಿ ಮೂವರನ್ನು ದೋಷಿಗಳೆಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ಎ.೯ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯ ಚೆಂಗಳ ಗ್ರಾಪಂ ಚೆರ್ಕಳ ಮನೆ ನಿವಾಸಿ ಮೊಹಮ್ಮದ್ ಮುಹಜೀರ್ ಸನಾಫ್ (35), ವಿದ್ಯಾನಗರ ಅಣಂಗೂರು ಟಿ.ವಿ.ಸ್ಟೇಷನ್ ರಸ್ತೆ ನಿವಾಸಿ ಎ.ಮೊಹಮ್ಮದ್ ಇರ್ಷಾದ್ (34) ಮತ್ತು ಎ.ಮೊಹಮ್ಮದ್ ಸಫ್ವಾನ್ (34) ಅಪರಾಧಿಗಳು.
ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ಕಳ್ಳ ಸಾಗಣೆಯ ಮೂಲಕ ತಂದಿದ್ದು, ಅದನ್ನು ಸಂಬಂಧಪಟ್ಟವರಿಗೆ ನೀಡದೆ ತನ್ನ ಸ್ನೇಹಿತ ಫಹೀಮ್ ಮತ್ತು ಆತನ ಸ್ನೇಹಿತರಾದ ಮೂವರು ಅಪರಾಧಿಗಳ ಜತೆ ಸೇರಿ ಮಾರಾಟ ಮಾಡಿದ್ದಾರೆ. ಆ ಬಳಿ ತಕಾರಾರು ಬಂದ ಹಿನ್ನೆಲೆಯಲ್ಲಿ ಮೂವರು ಸೇರಿ ಉಪಾಯದಿಂದ ಮಂಗಳೂರಿನ ಅತ್ತಾವರದ ಬಾಡಿಗೆ ಮನೆಯಲ್ಲಿ 2014ರ ಜು.1ರಂದು ನಾಫೀರ್ ಮತ್ತು ಫಹೀಮ್ರನ್ನು ಕೊಲೆ ಮಾಡಿ, ಕಾಸರಗೋಡಿನಲ್ಲಿ ಖರೀದಿಸಿದ್ದ ಜಾಗದಲ್ಲಿ ಹೂತು ಹಾಕಿದ್ದರು.
ಈ ಬಗ್ಗೆ ಪ್ರಕರಣ ದಾಖಲಾಗಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧಿಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್.ಅವರು ದೋಷಿಗಳೆಂದು ತೀರ್ಪು ನೀಡಿದ್ದಾರೆ.
ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಎ.9ರಂದು ಪ್ರಕಟವಾಗಲಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾಗಿದ್ದ ರಾಜು ಪೂಜಾರಿ 14 ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ಉಳಿದ ಸಾಕ್ಷಿಗಳನ್ನು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.