
ಮೇ 2ರಿಂದ 4: ದಕ್ಷಿಣ ಏಷ್ಯಾ ಪ್ರಾದೇಶಿಕ ಚರ್ಮರೋಗ ಸಮ್ಮೇಳನ
ಮಂಗಳೂರು: ಭಾರತೀಯ ಚರ್ಮರೋಗ, ಲೈಂಗಿಕ ರೋಗ ಹಾಗೂ ಕುಷ್ಟರೋಗ ತಜ್ಞರ‍್ಥ ಸಂಘ (ಐಎಡಿವಿಎಲ್)ವು ಮೇ. 2ರಿಂದ 4ರವರೆಗೆ ಮಂಗಳೂರಿನಲ್ಲಿ 13ನೇ ದಕ್ಷಿಣ ಏಷ್ಯಾ ಪ್ರಾದೇಶಿಕ ಚರ್ಮ ರೋಗ ಸಮ್ಮೇಳನ ಆಯೋಜಿಸುತ್ತಿದೆ.
ಐಎಡಿವಿಎಲ್‌ನ ರಾಷ್ಟ್ರೀಯ ಹಾಗೂ ಕರ್ನಾಟಕ ಮತ್ತು ಕರಾವಳಿ ಶಾಖೆಯ ಸಹಯೋಗದೊಂದಿಗೆ ಪ್ರಾದೇಶಿಕ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಸಮ್ಮೇಳನ ಟಿಎಂಎಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಎಸ್. ಪೈ ತಿಳಿಸಿದರು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮೇ 2ರಂದು ಸಂಜೆ 6.30ಕ್ಕೆ ಸಮ್ಮೇಳನ ಉದ್ಘಾಟಿಸುವರು ಎಂದರು.
ಸಮ್ಮೇಳನದಲ್ಲಿ 1200ಕ್ಕೂ ಅಧಿಕ ಚರ್ಮರೋಗ ತಜ್ಞರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. 600 ವೈಜ್ಞಾನಿಕ ಪ್ರಬಂಧಗಳು ಮಂಡನೆಯಾಗಲಿದ್ದು, ಸಮ್ಮೇಳನವು ಚರ್ಮರೋಗ ಲೇಸರ್‌ಗಳು ಮತ್ತು ಶಸ್ತ್ರ ಚಿಕಿತ್ಸಾ ತಂತ್ರಗಳ ಇತ್ತೀಚಿನ ಪ್ರಗತಿ ಸೇರಿದಂತೆ ಆಧುನಿಕ ಅವಿಷ್ಕಾರಗಳನ್ನು ಪ್ರದರ್ಶಿಸಲಿದೆ. ದಕ್ಷಿಣ ಏಷ್ಯಾವನ್ನು ಬಾಧಿಸುವ ನಿರ್ಲಕ್ಷಿತ ಉಷ್ಣ ವಲಯದ ಕಾಯಿಲೆಗಳ ಮೇಲೆ ವಿಶೇಷ ಗಮನ ಸೆಳೆಯಲಾಗುವುದು ಎಂದು ಸಮ್ಮೇಳನ ಸಂಘಟನಾ ಸಮಿತಿಯ ಸಂಯೋಜಕ ಡಾ. ರಮೇಶ್ ಭಟ್ ಮಾಹಿತಿ ನೀಡಿದರು.
ಪುಸ್ತಕ ಬಿಡುಗಡೆ-ಮೊತ್ತ ಆನಿಮಲ್ ಕೇರ್ ಟ್ರಸ್ಟ್‌ಗೆ:
ಸಮ್ಮೇಳನದಲ್ಲಿ ಡಾ. ಗಣೇಶ್ ಪೈ ಅವರ 47 ವರ್ಷಗಳ ವೃತ್ತಿ ಅನುಭವದ ಕುರಿತಾದ ‘ತೌಸಂಡ್ ಹವರ್ಸ್’ ಹ್ಯಾಮ್‌ಸ್ಟರ್ಸ್ ವೀಲ್ ಆಫ್ ಪ್ರ್ಯಾಕ್ಟೀಸ್ ಎಂಬ ಪುಸ್ತಕ ಬಿಡುಗಡಗೊಳ್ಳಲಿದೆ. ಆ ಪುಸ್ತಕ ಮಾರಾಟದಿಂದ ಬರುವ ಸಂಪೂರ್ಣ ಮೊತ್ತವನ್ನು ಆನಿಮಲ್ ಕೇರ್ ಟ್ರಸ್ಟ್‌ಗೆ ನೀಡಲಾಗುತ್ತದೆ. ಡಾ. ಗಣೇಶ್ ಪೈ ಅವರ ಮೂರನೆ ಪುಸ್ತಕ ಇದಾಗಿದ್ದು, ಈ ಹಿಂದಿನ ಪುಸ್ತಕದಿಂದ ದೊರೆತ ಸುಮಾರು ೬ ಲಕ್ಷ ರೂ. ಮೊತ್ತದಲ್ಲಿ ಆನಿಮಲ್ ಕೇರ್ ಟ್ರಸ್ಟ್‌ಗೆ ಆಂಬಲೆನ್ಸ್ ಖರೀದಿಗೆ ಒದಗಿಸಲಾಗಿದೆ ಎಂದು ಡಾ. ರಮೇಶ್ ಭಟ್ ತಿಳಿಸಿದರು.
ಸಮ್ಮೇಳನ ಸಂಘಟನಾ ಸಮಿತಿಯ ಸಹ ಅಧ್ಯಕ್ಷ ಡಾ. ಸುಕುಮಾರ್, ಸಂಘಟನಾ ಕಾರ್ಯದರ್ಶಿ ಜ್ಯೋತಿ ಜಯರಾಮನ್, ಕೋಶಾಧಿಕಾರಿ ಡಾ. ರೊಚೆಲ್ ಮೊಂತೆರೋ, ಡಾ. ಜೆಸಿಂತಾ ಮಾರ್ಟಿಸ್ ಉಪಸ್ಥಿತರಿದ್ದರು.