
41ನೇ ಸೆಂಟ್ರಲ್ ವಾರ್ಡಿನಲ್ಲಿ ನೀರಿನ ಅಭಾವ: ಮನಪಾ ಆಯುಕ್ತರಿಗೆ ಮನವಿ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 41ನೇ ಸೆಂಟ್ರಲ್ ವಾರ್ಡಿನಲ್ಲಿ ನೀರಿನ ಅಭಾವದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ನಿಕಟಪೂರ್ವ ಮನಪಾ ಸದಸ್ಯೆ ಪೂರ್ಣಿಮಾ ಅವರ ನೇತೃತ್ವದಲ್ಲಿ ಸ್ಥಳೀಯರು ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಪೂರ್ಣಿಮಾ ಅವರು, ಗೌರಿಮಠ, ಟಿ.ಟಿ. ರಸ್ತೆ, ಮಾರ್ಕೆಟ್ ರಸ್ತೆ, ಶರವು ದೇವಸ್ಥಾನ ರಸ್ತೆ, ಮಹಾಮಾಯ ಟೆಂಪಲ್ ರಸ್ತೆ, ಬಂದರು ಪ್ರದೇಶದಲ್ಲಿ ಕಳೆದ 2-3 ತಿಂಗಳಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಸ್ಥಳೀಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಪಾಲಿಕೆಯು ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದೆ. ಪಾಲಿಕೆ ಸದಸ್ಯೆಯಾಗಿ ನನ್ನ ಅವಧಿ ಮುಗಿದಿರಬಹುದು, ಆದರೂ ನನ್ನ ವಾರ್ಡಿನ ಜನತೆಯ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿ. ಉಸ್ತುವಾರಿ ಸಚಿವರು ಮಂಗಳೂರಿನಲ್ಲಿ ಇನ್ನೂ ಸಹ ಎರಡು ತಿಂಗಳಿಗೆ ಆಗುವಷ್ಟು ನೀರು ಇದೆ ಎಂದಿದ್ದಾರೆ. ಹಾಗಾದರೆ ನೀರು ಯಾಕೆ ಬಿಡುತ್ತಿಲ್ಲ? ಸಚಿವರು ಒಮ್ಮೆ ಈ ವಾರ್ಡಿಗೆ ಬಂದು ಜನತೆಯ ಸಮಸ್ಯೆಯನ್ನು ಕಣ್ಣಾರೆ ಕಂಡು ಆ ಮೇಲೆ ಮಾತಾಡಬೇಕು. ಇನ್ನು ಎರಡರಿಂದ ಮೂರು ದಿನ ಕಾದು ನೋಡುತ್ತೇವೆ, ಸಮಸ್ಯೆ ಬಗೆಹರಿಯದಿದ್ದರೆ ವಾರ್ಡಿನ ಜನತೆಯೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಿಯೇ ಸಿದ್ದ ಎಂದು ಎಚ್ಚರಿಕೆ ನೀಡಿದರು.
ವಾರ್ಡ್ ನಿವಾಸಿ ರಮೇಶ್ ಮಾತನಾಡಿ, ಸಚಿವರೇ ಇನ್ನು ಎರಡು ತಿಂಗಳು ನೀರಿನ ಸಮಸ್ಯೆ ಇಲ್ಲ ಎಂದು ಹೇಳಿದ ಮೇಲೆ ಅಧಿಕಾರಿಗಳು ಯಾಕೆ ನೀರು ಬಿಡುತ್ತಿಲ್ಲ? ನಮಗೆ ಸಾಕಾಗಿ ಹೋಗಿದೆ. ಒಂದೋ ನೀರು ಕೊಡಿ, ಇಲ್ಲವೇ ವಿಷ ಕೊಡಿ. ನಿಕಟ ಪೂರ್ವ ಪಾಲಿಕೆ ಸದಸ್ಯೆ ನಮ್ಮ ಪರವಾಗಿ ಪ್ರತಿಭಟನೆ ಮಾಡುವುದಾದರೆ ನಾವು ಸಹ ಅವರ ಜೊತೆ ಕೈಜೋಡಿಸುತ್ತೇವೆ ಎಂದು ಆಕ್ರೋಶದಿಂದ ಹೇಳಿದರು.
ಸ್ಥಳೀಯರಾದ ಗಣಪತಿ ಕಾಮತ್, ಮುರಳಿಧರ್ ನಾಯಕ್, ಪೂರ್ಣಿಮಾ ರಾವ್, ರವೀಂದ್ರ ಮಲ್ಯ, ಶ್ರೀಮತಿ, ಸತೀಶ್ ಮಲ್ಯ, ವಿಜಯಲಕ್ಷ್ಮಿ, ಸ್ಮಿತಾ ಶೆಣೈ, ವಿದ್ಯಾ, ತ್ರಿಷಾ ಮತ್ತಿತರರು ಉಪಸ್ಥಿತರಿದ್ದರು.